ಬೆಂಗಳೂರು ವಿವಿಗೆ ತಿಮ್ಮೇಗೌಡ ಹೊಸ ಸಾರಥಿ

ಪ್ರೊ.ತಿಮ್ಮೇಗೌಡ ಅವರು ಬೆಂಗಳೂರು ವಿವಿಯ ನೂತನ ಉಪ ಕುಲಪತಿಯಾಗಿ ಆಯ್ಕೆ ಮಾಡಲಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆದೇಶ ಹೊರಡಿಸಿದ್ದಾರೆ. ತಿಮ್ಮೇಗೌಡ ಅವರು ಬುಧವಾರ (ಫೆ.6) ಬೆಂಗಳೂರು ವಿವಿಯ ಉಪ ಕುಲಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.
ಈ ಹಿಂದೆ ಇದ್ದ ರಿಜಿಸ್ಟ್ರಾರ್ ಪ್ರೊಫೆಸರ್ ಮೈಲಾರಪ್ಪ ಅವರ ನೇಮಕಾತಿ ರದ್ದುಗೊಳಿಸಿ ಹೈಕೋರ್ಟ್ ವಿಭಾಗೀಯ ಪೀಠ ಕಳೆದ ವರ್ಷ ನ.21ರಂದು ಮಹತ್ವದ ಆದೇಶ ಹೊರಡಿಸಿತ್ತು.
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊಫೆಸರ್ ಮೈಲಾರಪ್ಪ ಅವರನ್ನು ನೂತನ ಕುಲಸಚಿವರಾಗಿ ನ.2, 2011ರಂದು ಕರ್ನಾಟಕ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ಮೂಲಕ ಕುಲಸಚಿವರಾಗಿ ನೇಮಕಗೊಂಡ ಮೊದಲ ದಲಿತ ಪ್ರೊಫೆಸರ್ ಎಂಬ ಕೀರ್ತಿಗೆ ಮೈಲಾರಪ್ಪ ಪಾತ್ರರಾಗಿದ್ದರು. ಅಲ್ಲದೆ 46 ವರ್ಷಕ್ಕೆ ವಿವಿ ರಿಜಿಸ್ಟ್ರಾರ್ ಆಗಿ ನೇಮಕಗೊಂಡು ಹೊಸ ಸಾಧನೆ ಮಾಡಿದ್ದರು.
ಉಪ ಕುಲಪತಿ ಸ್ಥಾನಕ್ಕೆ ಭಾರಿ ಲಾಬಿ: ಉಪ ಕುಲಪತಿ ಸ್ಥಾನದ ಆಕಾಂಕ್ಷಿಗಳಾದ ತಿಮ್ಮೇಗೌಡ ಹಾಗೂ ಜಿ.ಕೆ ಕಾರಂತ ಅವರು ಕಳೆದ ವಾರ ಉನ್ನತ ಶಿಕ್ಷಣ ಸಚಿವ ಸಿ.ಟಿ ರವಿ ಅವರನ್ನು ಕುಮಾರ ಕೃಪಾ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದ್ದರು.
ಉತ್ತಮ ಶೈಕ್ಷಣಿಕ ಹಿನ್ನೆಲೆಯುಳ್ಳ ತಿಮ್ಮೇಗೌಡ ಅವರು ಈ ಹಿಂದೆ ಮಂಗಳೂರು ವಿವಿಗೆ ಉಪ ಕುಲಪತಿಯಾಗಬೇಕಿತ್ತು. ಆದರೆ, ನಂತರ ನೇಮಕಾತಿ ರದ್ದಾಗಿತ್ತು. ಬೆಂಗಳೂರು ವಿವಿಗೆ ತಿಮ್ಮೇಗೌಡ ಅವರು ಪ್ರಬಲ ಅಭ್ಯರ್ಥಿಯಾಗಿದ್ದರು. ಇವರಿಗೆ ಆರೆಸ್ಸೆಸ್ ಹಾಗೂ ಎಬಿವಿಪಿ ಬೆಂಬಲಿತ ಜಿ.ಕೆ ಕಾರಂತ್ ಹಾಗೂ ಶಾಸಕ ವೈ.ಎ ನಾರಾಯಣ ಸ್ವಾಮಿ ಬೆಂಬಲಿತ ರಾಮಚಂದ್ರ ಸ್ವಾಮಿ ಪೈಪೋಟಿ ನೀಡಿದ್ದರು.
ಜೊತೆಗೆ ಬೆಂಗಳೂರು ವಿವಿ ಹಂಗಾಮಿ ಉಪ ಕುಲಪತಿ ಪ್ರೊ. ಎನ್. ರಂಗಸ್ವಾಮಿ, ಬೆಂಗಳೂರು ವಿವಿ ಭೌತಶಾಸ್ತ್ರ ವಿಭಾಗದ ಪ್ರೊ. ಎಂ.ಸಿ. ರಾಧಾಕೃಷ್ಣ, ಧಾರವಾಡದ ಕರ್ನಾಟಕ ವಿವಿಯ ಡಾ.ಎಸ್.ಬಿ. ಹಿಂಚಿಗೇರಿ ಅವರು ಹೆಸರು ಕೂಡಾ ಬೆಂಗಳೂರು ವಿವಿ ನೂತನ ಉಪ ಕುಲಪತಿ ಸ್ಥಾನಕ್ಕೆ ಪ್ರಸ್ತಾಪವಾಗಿತ್ತು.
ಕುವೆಂಪು ವಿವಿ ಮಾಜಿ ಉಪ ಕುಲಪತಿ ಎಸ್.ಪಿ ಹಿರೇಮಠ, ಕರ್ನಾಟಕ ವಿವಿ ಉಪ ಕುಲಪತಿ ಎಸ್ .ಕೆ ಸೈದಾಪುರ, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆ ಇನ್ಸ್ ಸ್ಟಿಟ್ಯೂಟ್(ISEC) ನಿರ್ದೇಶಕ ದೇಶಪಾಂಡೆ ಅವರು ಹೊಸ ಕುಲಪತಿ ಹುಡುಕುವ ಸಮಿತಿಯ ಸದಸ್ಯರಾಗಿದ್ದರು.












Click it and Unblock the Notifications