ಮರಾಠಿ ನಾಡಲ್ಲಿ ಎರಡು ದಿನ ಕನ್ನಡ ಡಿಂಡಿಮ

ಕನ್ನಡ ನಾಡು, ನುಡಿಗೆ ಅಹರ್ನಿಶಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ವಿದ್ಯಾವರ್ಧಕ ಸಂಘ ಆಯೋಜಿಸಿರುವ ಈ ಮಹಾಮೇಳಕ್ಕೆ ಗಣ್ಯಾತಿಗಣ್ಯರು ಆಗಮಿಸಲಿದ್ದಾರೆ. ಈ ಹಿಂದೆ ವಾರಣಸಿಯಲ್ಲಿ ಇಂಥದ್ದೇ ಮೇಳ ಆಯೋಜಿಸಲಾಗಿತ್ತು.
ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 3 ನೇ ಮಹಾಮೇಳದ ಬಗ್ಗೆ ವಿವರಿಸಿದ ಸಂಘದ ಅಧ್ಯಕ್ಷ ಡಾ.ಪಾಟೀಲ ಪುಟ್ಟಪ್ಪ, ಎರಡು ದಿನಗಳ ಕಾಲ ನಡೆಯಲಿರುವ ಈ ಮಹಾಮೇಳವನ್ನು ಧರ್ಮಸ್ಥಳದ ಧರ್ಮಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ ಎಂದರು. ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ, ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.
ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಸೊಲ್ಲಾಪುರ ಕನ್ನಡಿಗ ಕಿರುಹೊತ್ತಿಗೆ ಬಿಡುಗಡೆಗೊಳಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು, ಡೊಂಬಿವಿಲಿ ಶಾಸಕರಾದ ರಮೇಶ ಪಾಟೀಲ, ರವೀಂದ್ರ ಚವಾಣ, ಕರ್ನಾಟಕ ವಿಶ್ವ ವಿದ್ಯಾಲಯ ಕುಲಪತಿ ಡಾ.ಎಚ್.ಬಿ.ವಾಲಿಕಾರ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪಾಟೀಲ್ ಪುಟ್ಟಪ್ಪ ಹೇಳಿದರು.
ಚಿಂತನಾ ಗೋಷ್ಠಿ : ಮಹಾಮೇಳದಲ್ಲಿ ವಿವಿಧ ವಿಷಯಗಳ ಕುರಿತು ಚಿಂತನಾ ಗೋಷ್ಠಿಗಳು ನಡೆಯಲಿದ್ದು, ಹೊರನಾಡಿನ ಮಕ್ಕಳಲ್ಲಿ ಕನ್ನಡ ಪ್ರತಿಷ್ಠಾನ, ವಚನಕಾರರ ಮಾನವೀಯ ನಡೆ, ಕನ್ನಡ ಎಂದರೆ ಕುಣಿಯುವದೆನ್ನ ಮನ, ಕನ್ನಡ ಸಾಹಿತ್ಯಕ್ಕೆ ಮಹಾರಾಷ್ಟ್ರದ ಕೊಡುಗೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಜ್ಞರು ವಿಷಯ ಮಂಡನೆ ಮಾಡಲಿದ್ದಾರೆ
ಫೆ.10 ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ, ಡೊಂಬಿವಲಿ ಪಾಲಿಕೆ ಆಯಕ್ತ ರಾಮನಾಥ ಸೋನವಣಿ ಭಾಗವಹಿಸಲಿದ್ದಾರೆ ಎಂದು ಸಾಹಿತಿ ಪಾಪು ಹೇಳಿದರು.
ಹೊರದೇಶ, ಹೊರ ರಾಜ್ಯಗಳಲ್ಲಿರುವ ಕನ್ನಡಿಗರು ಕರ್ನಾಟಕದ ರಾಯಭಾರಿಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರು ಕನ್ನಡಿಗರಾಗಿಯೇ ಉಳಿಯಬೇಕು ಎನ್ನುವ ಉದ್ದೇಶದಿಂದ ವಿದ್ಯಾವರ್ಧಕ ಸಂಘ ಹೊರನಾಡು ಕನ್ನಡಿಗರ ಸಮಾವೇಶ ಆಯೋಜಿಸುವ ಮೂಲಕ 'ನೀವೂ ನಮ್ಮವರು' ಎನ್ನುವ ಭಾವನೆ ಪ್ರೇರಪಿಸುವ ಕೆಲಸ ಮಾಡುತ್ತಿದೆ ಕನ್ನಡ ಪರ ಹೋರಾಟಗಾರ ಪಾಟೀಲ ಪುಟ್ಟಪ್ಪ ಎಂದರು.












Click it and Unblock the Notifications