ಶಾಲಾ ಮಗುವಿಗಾಗಿ ಅಬುಧಾಬಿ ಯುವರಾಜ ಮಾಡಿದ್ದೇನು?

ಆತ ಜನರಲ್ ಶೇಕ್ ಮೊಹಮದ್ ಬಿನ್ ಝಯೀದ್ ಅಲ್ ನಹ್ಯಾನ್, ಅಬು ಧಾಬಿಯ ರಾಜಕುಮಾರ. ಕೊಲ್ಲಿ ರಾಷ್ಟ್ರಗಳ ಸೇನಾ ಪಡೆಗಳ ಸುಪ್ರೀಂ ಕಮಾಂಡರ್. ಇಂತಿಪ್ಪ ರಾಜಕುಮಾರ ಅರಸೊತ್ತಿಗೆಯಲ್ಲಿ ಕಾಲ ಕಳೆಯುವುದನ್ನು ಬಿಟ್ಟು ನಿನ್ನೆ ಬೀದಿ ಬದಿಯಲ್ಲಿ ಪಟ್ಟಾಂಗ ಹಾಕಿಕುಳಿತುಬಿಟ್ಟಿದ್ದರು(ಒಮ್ಮೆ ಪಕ್ಕದ ಚಿತ್ರ ನೋಡಿ).
ರಸ್ತೆಯಲ್ಲಿ ಓಡಾಡುವವರು ಇದೇನು ನಮ್ಮ ಭವಿಷ್ಯದ ದೊರೆ ಹೀಗೆ ರಸ್ತೆಯಲ್ಲಿ... ಎಂದು ನಗಾಡಿಕೊಂಡು ಹೋಗುತ್ತಿದ್ದರು. ಆದರೆ ಯುವರಾಜ ಶೇಕ್ ಮೊಹಮದ್ ಸುತರಾಂ ಅಲ್ಲಿಂದ ಕದಲಲಿಲ್ಲ. ಹೀಗೆ ರಸ್ತೆಯಲ್ಲಿ ಕಲ್ಲಿನಂತೆ ಕುಳಿತಿದ್ದ ಹೂವಿನಂತಹ ಮನಸ್ಸಿನ ಯುವರಾಜ ತಾನೊಬ್ಬ ಜವಾಬ್ದಾರಿಯುತ, down to earth ಯುವರಾಜ ಎಂಬುದನನ್ನು ಲೋಕಕ್ಕೆ ಪರಿಚಯಿಸಿದ್ದರು.
ಅಂಥಾದ್ದೇನಾಯಿತು ಅಂದರೆ ಯುವರಾಜ ಅಬು ಧಾಬಿಯಲ್ಲಿ ಜಮ್ಮಂಥ ಕಾರು ಓಡಿಸಿಕೊಂಡು ಹೋಗುತ್ತಿದ್ದರು. ಆಗಲೇ ಅವರ ಕಣ್ಣಿಗೆ ಬಿದ್ದಿದ್ದು. ಶಾಲಾ ಮಗುವೊಂದು ದಿಕ್ಕುಗೆಟ್ಟವಳಾಗಿ ಕುಳಿತಿರುವುದು. ತನ್ನ ನಾಡಿನಲ್ಲಿ ಇಂತಹ ಅಚಾತುರ್ಯವಾ ಎಂದು ಬಗೆದ ಸ್ಥಿತಪ್ರಜ್ಞ ಯುವರಾಜ ಶೇಕ್ ಮೊಹಮದ್, ಚಕ್ಕನೆ ಕಾರಿಗೆ ಬ್ರೇಕ್ ಹಾಕಿದರು.
ಕಾರಿನಿಂದ ಇಳಿದವರೆ ಆ ಮಗು ಮತ್ತಷ್ಟು ಆತಂಕಕ್ಕೀಡಾಗುವುದು ಬೇಡವೆಂದು ಹಾಗೇ ಮೆಲ್ಲಗೆ ಅವಳ ಬಳಿ ಹೋಗಿ ಕುಳಿತುಬಿಟ್ಟರು. ಮುಂದೆ ಸುಮಾರು ಕಾಲ ಜಪ್ಪಯ್ಯ ಅಂದರೂ ಅಲ್ಲಿಂದ ಕದಲಲಿಲ್ಲ. ಈ ಮಧ್ಯೆ ಶಾಲಾ ಮಗುವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾ, 'ಏನು ಪುಟ್ಟಿ, ಯಾಕಮ್ಮಾ ಒಬ್ಬಳೇ ಕುಳಿತಿದ್ದೀಯಾ?' ಎಂದು ಆರ್ದತೆಯಿಂದ ಕೇಳಿದರು.
ಆದರೆ 'ಹೊರಗಡೆ ಯಾರಾದರೂ ಅಪರಿಚಿತರು ಮಾತನಾಡಿಸಿದರೆ, ಏನಾದರೂ ತಿನ್ನಲು ಕೊಟ್ಟರೆ ಬಿಲ್ಕುಲ್ ಬೇಡ ಅಂತ ಹೇಳಬೇಕು' ಎಂದು ನಾವು ನಮ್ಮ ಮಕ್ಕಳಿಗೆ ಹೇಳುವಂತೆ ಆ ಮಗುವಿಗೂ ಅದರ ಅಪ್ಪ-ಅಮ್ಮ ಕಟ್ಟುನಿಟ್ಟಾಗಿ ಕಿವಿಮಾತು ಹೇಳಿದ್ದರು. ಹಾಗಾಗಿ ಶಾಲಾ ಮಗು 'ಅಪರಿಚಿತ ಯುವರಾಜನ' ಜತೆ ಮಾತಿಗಿಳಿಯಲಿಲ್ಲ.
ಬೇಸರಿಸಿಕೊಳ್ಳದ ನಮ್ಮ ಯುವರಾಜ ಮತ್ತೊಮ್ಮೆ ಅವಳನ್ನು ಮಾತಿಗೆಳೆದಾಗ 'ನಮ್ಮ ಅಪ್ಪ ಬಂದು ನನ್ನನ್ನು ಕರೆದುಕೊಂಡು ಹೋಗಬೇಕಿತ್ತು. ಆದರೆ ಇನ್ನೂ ಬಂದಿಲ್ಲ' ಎಂದು ಅಳುಧ್ವನಿಯಲ್ಲಿ ಹೇಳಿದಳು. ಅಲ್ಲಿಗೆ ಯುವರಾಜ ಶೇಕ್ ಮೊಹಮದ್ ಗೆ ತಾನಂದುಕೊಂಡಂತೆ ಮಗು ಸಮಸ್ಯೆ ಎದುರಿಸುತ್ತಿದ್ದಾಳೆ ಎಂಬುದು ನಿಕ್ಕಿಯಾಯಿತು.
ಸೋ, ವಿಷಯ ತಿಳಿದಮೇಲೂ ಸುಮ್ಮನಿರುವುದು ತನ್ನಿಂದಾಗದು ಎಂದು ಯುವರಾಜ, ಮಗುವಿನ ಅಪ್ಪ ಅಲ್ಲಿಗೆ ಬಂದು ಮಗುವನ್ನು ಮನೆಗೆ ಕರೆದುಕೊಂಡು ಹೋಗುವವರೆಗೂ ನಗುಮುಖದೊಂದಿಗೆ ಮಗುವಿನ ಸನಿಹವೇ ಕುಳಿತಿದ್ದರು.












Click it and Unblock the Notifications