ಆಸ್ತಿ ಕೇಸ್: ಮಾನನಷ್ಟ ಮೊಕದ್ದಮೆ ಹೂಡುವೆ- ವರ್ತೂರು

ಕೋಲಾರದ ಕ್ಷೇತ್ರ ಶಾಸಕ ವರ್ತೂರು ಪ್ರಕಾಶ್ ಅವರು ಚುನಾವಣೆ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ನಿಜ ಆಸ್ತಿಯನ್ನು ಮರೆಮಾಚಿದ್ದಾರೆ. ಅವರು ಘೋಷಿತ ಪ್ರಮಾಣಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ. ಇದೆಲ್ಲ ಆದಾಯ ಮೀರಿದ ಅಕ್ರಮ ಆಸ್ತಿಯಾಗಿದೆ ಎಂದು ದೂರುದಾರರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕೋಲಾರದ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರು ಚುನಾವಣೆ ಆಯೋಗಕ್ಕೆ ತಪ್ಪು ಮಾಹಿತಿ ಸಲ್ಲಿಸಿದ್ದಾರೆ ಎಂದು ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಬಿಎಂ ಶಂಕರೇಗೌಡ ಈ ದೂರನ್ನು ದಾಖಲಿಸಿದ್ದಾರೆ.
ಆದರೆ ಲೋಕಾಯುಕ್ತ ಮತ್ತು ರಾಜ್ಯ ಚುನಾವಣೆ ಆಯೋಗಕ್ಕೆ ನೀಡಿರುವ ಆಸ್ತಿ ಘೋಷಣೆಯಲ್ಲಿ ಸುಳ್ಳು ಮಾಹಿತಿ ನೀಡಿಲ್ಲ. ನಾನು ಘೋಷಿಸಿರುವ ಆಸ್ತಿಯ ಹೊರತಾಗಿ ನನ್ನ, ನನ್ನ ಪತ್ನಿ ಅಥವಾ ಮಕ್ಕಳ ಹೆಸರಿನಲ್ಲಿ ಯಾವುದೇ ಆಸ್ತಿಪಾಸ್ತಿ ಹೊಂದಿಲ್ಲ.
ಚುನಾವಣೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಕೆಲ ನಾಯಕರು (ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಮಾಜಿ ಸಚಿವ ಕೆ ಶ್ರೀನಿವಾಸ ಗೌಡ) ನನ್ನ ವಿರುದ್ಧ ಸಂಚು ರೂಪಿಸಲು ಈ ಆರೋಪ ಹೊರಿಸಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಸಚಿವ ವರ್ತೂರ್ ಕೋಲಾರದಲ್ಲಿ ಪ್ರತಿಕ್ರಿಯಿಸಿದ್ದಾರೆ.
ದೂರೇನು?: ಕೋಲಾರ ನಿವಾಸಿ ಬಿ.ಎಂ.ಶಂಕರೇಗೌಡ ಎಂಬುವವರು ಸೋಮವಾರ ಲೋಕಾಯುಕ್ತ ಕೋರ್ಟಿನಲ್ಲಿ ಸಚಿವರ ವಿರುದ್ಧ ದೂರು ನೀಡಿದ್ದಾರೆ. 2008ರಲ್ಲಿ ಮಾಡಿರುವ ಘೋಷಣೆಯಂತೆ ವರ್ತೂರ್ ಪ್ರಕಾಶ್ ಅವರಿಗೆ ವಾರ್ಷಿಕ ಆದಾಯ ಶೂನ್ಯವಾಗಿದ್ದು, ಯಾವುದೇ ಆಸ್ತಿ ಇಲ್ಲ. ತಮ್ಮ ಬಳಿ 150 ಗ್ರಾಂ ಚಿನ್ನ ಮತ್ತು ತಮ್ಮ ಪತ್ನಿ ಬಳಿ 500 ಗ್ರಾಂ ಚಿನ್ನ ಮಾತ್ರ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಆದರೆ, ಇದೇ ವರ್ಷದಲ್ಲಿ ಲೋಕಾಯುಕ್ತಕ್ಕೆ ಸಲ್ಲಿಸಿರುವ ಘೋಷಣೆಯಲ್ಲಿ ತಮ್ಮ ಬಳಿ 10 ಕೆಜಿ ಬೆಳ್ಳಿ ಇದ್ದು, ಯಾವುದೇ ರೀತಿಯ ಚಿನ್ನ ಇಲ್ಲ ಎಂದು ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಎರಡು ವರ್ಷದ ಬಳಿಕ 2010ರಲ್ಲಿ ಬೆಂಗಳೂರು ಸುತ್ತಮುತ್ತ ಅಸ್ತಿ ಹೊಂದಿದ್ದು, ವಾರ್ಷಿಕ ಆದಾಯ 14.50 ಲಕ್ಷ ರೂ. ಎಂದು ಘೋಷಣೆ ಮಾಡಿಕೊಂಡಿದ್ದಾರೆ. ಇದಲ್ಲದೆ, 2007ರಲ್ಲಿ ನೀತಿನ್ ಪ್ರಾಜೆಕ್ಟ್ ಪ್ರೈ.ಲಿ. ಹೆಸರಲ್ಲಿ ವರ್ತೂರು ಪ್ರಕಾಶ್ ಕಂಪನಿಯ ಹೆಸರನ್ನು ನೊಂದಾಯಿಸಿರುವುದು ಪತ್ತೆಯಾಗಿದೆ.
ಕಂಪನಿ ಹೊಂದಿದ್ದರೂ ಯಾವುದೇ ಆದಾಯ ಇಲ್ಲ ಎಂದು ಘೋಷಣೆ ಮಾಡಿರುವುದರಿಂದ ವರ್ತೂರ್ ಪ್ರಕಾಶ್ ಅವರು, ಅಕ್ರಮ ಆಸ್ತಿ ಸಂಪಾದನೆಯಲ್ಲಿ ತೊಡಗಿದ್ದರು ಎಂಬುದು ಸಾಬೀತಾಗುತ್ತದೆ ಎಂದು ಶಂಕರೇಗೌಡ ನೀಡಿರುವ ದೂರಿನಲ್ಲಿ ವಿವರಿಸಲಾಗಿದೆ.












Click it and Unblock the Notifications