ರಾಜಾನುಕುಂಟೆ: ರಜೆ ನೀಡದ SI ಪೇದೆ ಗುಂಡಿಗೆ ಬಲಿ

ರಾಜಾನುಕುಂಟೆ ಠಾಣೆಯ ಪ್ರೊಬೆಷನರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿಜಯ ಕುಮಾರ್ ಮೇಲೆ ಅದೇ ಠಾಣೆಯ ಪೇದೆ ಆನಂದ ಕುಮಾರ್ ಮೂರು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಪಿಎಸೈ ವಿಜಯ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣ ಯಲಹಂಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ನೇರವಾಗಿ ಎದೆಗೆ ಗುಂಡೇಟು ತಿಂದು ಗಾಯಗೊಂಡಿದ್ದ ವಿಜಯ ಕುಮಾರ್ ಅವರನ್ನು ಪೊಲೀಸ್ ಜೀಪಿನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ದಾಳಿ ನಡೆಸಿದ ಪೇದೆ ಆನಂದ ಕುಮಾರನನ್ನು ಬಂಧಿಸಲಾಗಿದೆ. ಹಿರಿಯ ಅಧಿಕಾರಿಗಳು ಠಾಣೆಗೆ ದೌಡಾಯಿಸಿದ್ದಾರೆ.
ಠಾಣೆಯಲ್ಲಿದ್ದ ಬಂದೂಕಿನಿಂದ ಇಂದು ಬೆಳಗ್ಗೆ 11 ಗಂಟೆಯಲ್ಲಿ ಆನಂದ ಕುಮಾರ್ ಈ ದಾಳಿ ನಡೆಸಿದ್ದಾರೆ. ವಿಜಯ ಕುಮಾರ್ ಮತ್ತು ಆನಂದ ಕುಮಾರ್ ಮಧ್ಯೆ ದಾಳಿಗೆ ಮುನ್ನ ತೀವ್ರ ಮಾತಿನ ಚಕಮಕಿ ನಡೆದಿದ್ದು, ಹಿಂದಿನಿಂದಲೂ ಇಬ್ಬರ ಮಧ್ಯೆ ತೀವ್ರ ಮನಸ್ತಾಪವಿತ್ತು ಎನ್ನಲಾಗಿದೆ.
ಪ್ರೊಬೆಷನರಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿಜಯ ಕುಮಾರ್ ಈ ಹಿಂದೆ ಪೇದೆಯಾಗಿದ್ದು, ಇತ್ತೀಚೆಗೆ PSI ಆಗಿ ನೇಮಕಗೊಂಡಿದ್ದರು. ಅವರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ. ಆರೋಪಿ ಆನಂದ್ ಗೌರಿಬಿದನೂರಿನ ವಿವಿ ಪುರಂ ನಿವಾಸಿ. ಪ್ರಸ್ತುತ ಆರೋಪಿಯನ್ನು ದೊಡ್ಡಬಳ್ಳಾಪುರ Dy.SP ಕಚೇರಿಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications