CA ಗೆದ್ದ ಪ್ರೇಮಾಳತ್ತ ಕೊಡುಗೆಗಳ ಮಹಾಪೂರ
ಮುಂಬೈ, ಜ.26 : ಮುಂಬೈ ರಿಕ್ಷಾ ಓಡಿಸುವ ಜಯಕುಮಾರ್ ಅವರ ಪುತ್ರಿ ಪ್ರೇಮಾ ಈಗ ಎಲ್ಲರ ಪ್ರೀತಿಪಾತ್ರಳಾಗಿದ್ದಾಳೆ. ವಿದ್ಯೆಗೆ ಬಡತನ ಎಂದಿಗೂ ಅಡ್ಡಿಯಾಗಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರೇಮಾಳತ್ತ ಹತ್ತು ಹಲವು ಕೊಡುಗೆಗಳು ಹರಿದು ಬಂದಿದೆ.
ಸಿಎ ಪದವಿಯನ್ನು ಬಳಸಿಕೊಂಡು ಮನೆಯವರನ್ನು ನೆಮ್ಮದಿಯಾಗಿಡಬೇಕೆನ್ನುವುದು 24 ವರ್ಷ ಪ್ರಾಯದ ಪ್ರೇಮಾಳ ಕನಸು. ಪ್ರೇಮಾಳ ಸಾಧನೆಗೆ ಮೆಚ್ಚಿ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಹುದ್ದೆ ನೀಡಲು ಮುಂದಾಗಿದೆ.

ಯಾವುದೇ ಸಂದರ್ಶನವಿಲ್ಲದೆ ನೇರವಾಗಿ ಮ್ಯಾನೇಜರ್ ಆಗಿ ಅಧಿಕಾರ ಸ್ವೀಕರಿಸುವಂತೆ ಇಂಡಿಯನ್ ಬ್ಯಾಂಕ್ ಕೇಳಿಕೊಂಡಿದೆ. ಮಹಾರಾಷ್ಟ್ರದ ರಾಜ್ಯಪಾಲ ಕೆ ಶಂಕರನಾರಾಯಣನ್ ಅವರು ಶುಕ್ರವಾರ(ಜ.25) ಪ್ರೇಮಾರನ್ನು ಅಭಿನಂದಿಸಿ 1 ಲಕ್ಷ ರು ಪ್ರೋತ್ಸಾಹಧನ ನೀಡಿ ಹರಸಿದ್ದಾರೆ.
ಮುಂಬೈ ಉಪನಗರ ಮಲಾಡ್‌ನಲ್ಲಿರುವ 300 ಚದರ ಅಡಿಯ ಎಸ್. ಬಿ. ಚಾಳ್‌ನ ಮನೆಯಲ್ಲಿ ಸಂಭ್ರಮ ಉಕ್ಕಿ ಹರಿದಿದೆ. ಆಟೋರಿಕ್ಷಾ ಓಡಿಸುತ್ತಾ ಕಷ್ಟ ಪಡುತ್ತಿರುವ ಅಪ್ಪನಿಗೆ ವಿಶ್ರಾಂತಿ ಕೊಡುವ ಸಂಕಲ್ಪ ನನ್ನದು ಎನ್ನುವ ಪ್ರೇಮಾ, ಸಿಎ ಪರೀಕ್ಷೆಯಲ್ಲಿ 800ರಲ್ಲಿ 607 ಅಂಕ ಗಳಿಸಿದ್ದು ಮಹಾನ್ ಸಾಧನೆ ಎನ್ನಲಡ್ಡಿಯಿಲ್ಲ.
ತಮಿಳುನಾಡು ಮೂಲದ ಈ ಕುಟುಂಬದ ಪರಿಸ್ಥಿತಿ ಅರಿತ ತಮಿಳುನಾಡು ಸಿಎಂ ಜಯಲಲಿತಾ ಅವರು 10 ಲಕ್ಷ ಬಹುಮಾನ ಘೋಷಿಸಿದ್ದಾರೆ. ಡಿಎಂಕೆ ಪಕ್ಷ 1 ಲಕ್ಷ ಇನಾಮು ನೀಡಿದೆ.
ಎರಡು ದಶಕಗಳ್ ಹಿಂದೆ ತಮಿಳುನಾಡಿನಿಂದ ಮುಂಬೈಗೆ ವಲಸೆ ಬಂದ ಪ್ರೇಮಾಳ ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಳಿಕೊಳ್ಳುವಂತಿಲ್ಲ. ಆದರೆ, ಪ್ರೇಮಾಳ ಶಾಲಾ ದಿನಗಳಿಂದಲೇ ಓದಿನಲ್ಲಿ ಸದಾ ಮುಂದಿದ್ದಳು. ಬಿಕಾಂ ತೃತೀಯ ವರ್ಷದ ಪರಿಕ್ಷೆಯಲ್ಲಿ ಆಕೆ ಶೇ.90 ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದಿದ್ದಳು.
ನಗಿನ್‌ದಾಸ್ ಖಾಂಡ್ವಾಲ ಕಾಲೇಜಿನ ಪದವೀಧರೆಯಾಗಿರುವ ಆಕೆ ಮುಂಬಯಿ ವಿವಿಯಿಂದ ಎಂಕಾಂ ಪದವಿ ಪಡೆದುಕೊಂಡಿದ್ದಾಳೆ.
ನಾಲ್ಕು ಮಂದಿಯ ಹೊಟ್ಟೆ ಹೊರೆಯಲು ರಿಕ್ಷಾದಲ್ಲಿ ಬರುವ ಗಳಿಕೆ ತಿಂಗಳಿಗೆ 15 ಸಾವಿರ ರು ಮೀರುತ್ತಿರಲಿಲ್ಲ. ಇದೇ ಆದಾಯ ಮೂಲವಾಗಿದ್ದರಿಂದ ಶಾಲಾ ಕಾಲೇಜು ಶುಲ್ಕದ ಸಮಸ್ಯೆ ಇದ್ದೇ ಇತ್ತು. ಆದರೆ, ಶಾಲಾ ದಿನಗಳಿಂದಲೇ ಅವಳಿಗೆ ವಿದ್ಯಾರ್ಥಿವೇತನ ಬರುತ್ತಿದ್ದರಿಂದ ಓದು ಮುಂದೆ ಸಾಗಿತ್ತು.
ಪ್ರೇಮಾ ಅವರ ಅಪ್ಪ ಜಯಕುಮಾರ್ 20 ವರ್ಷಗಳಿಂದ ಮುಂಬಯಿಯಲ್ಲಿ ರಿಕ್ಷಾ ಓಡಿಸುತ್ತಿದ್ದಾರೆ. ಪ್ರೇಮಾ ಸಹೋದರ ಧನರಾಜ್ ಕೂಡ ಈ ವರ್ಷವೇ ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ತೇರ್ಗಡೆಯಾಗಿದ್ದಾನೆ. ಹಾಗೂ ಇಬ್ಬರು ಪರೀಕ್ಷೆಗೆ ಒಟ್ಟಿಗೆ ಓದಿಕೊಳ್ಳುತ್ತಿದ್ದರು ಎಂಬುದು ವಿಶೇಷ. ಈಗ ಎಚ್ಚರಿಕೆಯಿಂದ ತನ್ನ ವೃತ್ತಿ ಬದುಕು ರೂಪಿಸಿಕೊಳ್ಳುತ್ತೇನೆ ಎಂದು ಪ್ರೇಮಾ ಹೇಳಿದ್ದಾರೆ.












Click it and Unblock the Notifications