ಗಣತಂತ್ರ ದಿನ ಉಗ್ರರ ಭೀತಿ ಇಲ್ಲ: ಮಿರ್ಜಿ
ಬೆಂಗಳೂರು, ಜ.25: ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮಾಡಲಾಗುತ್ತಿದೆ. ಈ ಬಾರಿ ಉಗ್ರರ ಭೀತಿ ಇಲ್ಲ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ಗಣರಾಜ್ಯೋತ್ಸವ ಸಮಾರಂಭ ನಡೆಯುವ ಮಾಣಿಕ್ ಷಾ ಪರೇಡ್ ಗ್ರೌಂಡ್ ನಲ್ಲಿ ಗುರುವಾರ ಸಂಜೆ ಹಾಗೂ ಶುಕ್ರವಾರ ಬೆಳಗ್ಗೆ ಪರಿಶೀಲನೆ ನಡೆಸಿದ ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ಅವರು ಈ ಬಾರಿಯ ಗಣರಾಜ್ಯೋತ್ಸವಕ್ಕೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಭದ್ರತೆಗೆ 8 ಡಿಸಿಪಿ, 16 ಎಸಿಪಿ, 50 ಇನ್ಸ್‌ಪೆಕ್ಟರ್‌ಗಳು, 100 ಸಬ್‌ಇನ್ಸ್‌ಪೆಕ್ಟರ್ ಗಳು, 20 ಮಹಿಳಾ ಸಬ್ ಇನ್ಸ್‌ಪೆಕ್ಟರ್ ಹಾಗೂ 380 ಮಂದಿ ಸಂಚಾರ ಪೊಲೀಸರು ಸೇರಿದಂತೆ ಸುಮಾರು 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.
ಮೈದಾನದ ಒಳಗೂ, ಹೊರಗೂ ಪೊಲೀಸರು ಮಫ್ತಿಯಲ್ಲಿ ಕರ್ತವ್ಯದಲ್ಲಿರುತ್ತಾರೆ. ಮೈದಾನದ ಸುತ್ತಲೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ವ್ಯವಸ್ಥಿತ ಸಂಚಾರ ನಿಯಂತ್ರಣಕ್ಕೆ ಕ್ರಮ ಕೂಡ ಕೈಗೊಳ್ಳಲಾಗಿದೆ. ಆಕಸ್ಮಿಕ ವಿಪತ್ತು ಎದುರಿಸಲು 20 ಆಂಬ್ಯುಲೆನ್ಸ್, 3 ಅಗ್ನಿಶಾಮಕ ದಳಗಳನ್ನು ನಿಯೋಜಿಸಲಾಗಿದೆ.ಅಪಘಾತ ಸಂಭವಿಸಿದರೆ ಸೂಕ್ತ ಚಿಕಿತ್ಸೆಗೆ ನಗರದ 25 ಆಸ್ಪತ್ರೆಗಳಲ್ಲಿ 1200 ಹಾಸಿಗೆಗಳನ್ನು ಕಾಯ್ದಿರಿಸಲು ಸೂಚಿಸಲಾಗಿದೆ ಎಂದು ಆಯುಕ್ತ ಮಿರ್ಜಿ ಹೇಳಿದರು.
ವೈವಿಧ್ಯಮಯ ಕಾರ್ಯಕ್ರಮಗಳು: ಜ.26ರಂದು ಬೆಳಗ್ಗೆ 9 ಗಂಟೆಗೆ ರಾಜ್ಯಪಾಲ ಡಾ. ಎಚ್.ಆರ್. ಭಾರದ್ವಾಜ್ ಧ್ವಜಾರೋಹಣ ನೆರವೇರಿಸಿ ಗೌರವ ರಕ್ಷೆ ಸ್ವೀಕರಿಸುವರು. ನಂತರ ನಾಡಿನ ಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪಥಸಂಚಲನದಲ್ಲಿ ಪೊಲೀಸ್, ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ 52 ತುಕಡಿಗಳಲ್ಲಿ 1600 ಮಂದಿ ಭಾಗವಹಿಸುವರು. ನಗರದ ವಿವಿಧ ಶಾಲೆಗಳ 2500 ಶಾಲಾ ಮಕ್ಕಳು ಪ್ರಮುಖ 4 ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ.
ಶಾಂತಿನಿಕೇತನ ಟ್ರಸ್ಟ್ ಶಾಲೆಯ 680 ಮಕ್ಕಳು ಮಾತೃಭೂಮಿಗೆ ನಮನ, ಸರ್ಕಾರಿ ಪ್ರೌಢಶಾಲೆಗಳ 700 ವಿದ್ಯಾರ್ಥಿಗಳು ವೀರ ಭಾರತೀಯರು, ವಿಎಲ್‌ಎಸ್ ಪ್ರೌಢಶಾಲೆಯ 700 ಮಕ್ಕಳು ಎಂಟೆದೆ ಭಂಟ, ಎಸ್‌ಬಿಎಸ್ ವಿದ್ಯಾಮಂದಿರದ 700 ವಿದ್ಯಾರ್ಥಿಗಳು ರೈತ ನಮನ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ
ಈ ಬಾರಿ 11 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಅದರಲ್ಲಿ ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಗೆ ಆಸನದ ವ್ಯವಸ್ಥೆ ಕಲ್ಪಿಸಲಾಗಿದೆ. ವೀಕ್ಷಣಾ ಗ್ಯಾಲರಿಯನ್ನು ಕೂಡ 60 ಅಡಿಗಳಷ್ಟು ಹೆಚ್ಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದರು.












Click it and Unblock the Notifications