ಮುಂಬೈನಲ್ಲಿ ಅಡಿಗ ಹತ್ಯೆ ಆರೋಪಿ ಜ್ಯೋತಿಷಿ ಬಂಧನ

ಬುಧವಾರ, ಜ.23ರ ರಾತ್ರಿ ಮುಂಬೈನಲ್ಲಿ ರಮೇಶ್ ಬಾಯರಿ ಅವರನ್ನು ಬಂಧಿಸಲಾಗಿದ್ದು, ಗುರುವಾರ ಅವರನ್ನು ಕುಂದಾಪುರಕ್ಕೆ ಕರೆತರಲಾಗಿದೆ. ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಯರಿ ಅವರ ಸಂಬಂಧಿ ಮತ್ತೊಬ್ಬ ಜ್ಯೋತಿಷಿ ಸುಬ್ರಮಣ್ಯ ಉಡುಪ ಸೇರಿದಂತೆ ಆರು ಜನರನ್ನು ಈಗಾಗಲೆ ಬಂಧಿಸಲಾಗಿದೆ. ಈಗ ಬಂಧಿತನಾಗಿರುವ ಬಾಯರಿ 7ನೇ ಮತ್ತು ಪ್ರಮುಖ ಆರೋಪಿ.
ಚಿಕ್ಕಮಗಳೂರಿನ ಕಡೂರಿನ ಮದಗದ ಕೆರೆಯಲ್ಲಿ ವಾಸುದೇವ ಅಡಿಗ ಅವರು ಭೀಕರವಾಗಿ ಹತ್ಯೆಗೀಡಾಗಿದ್ದರು. ಕೊಳೆತ ಸ್ಥಿತಿಯಲ್ಲಿ ಅವರ ದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ಅವರ ಕೈಕಾಲನ್ನು ಹಗ್ಗದಿಂದ ಬಿಗಿದು, ಅವರ ಬೆನ್ನಿಗೆ 20 ಕೆಜಿ ತೂಕದ ಕಲ್ಲನ್ನು ಕಟ್ಟಿ ಭೀಕರವಾಗಿ ಹತ್ಯೆಗೈಯಲಾಗಿತ್ತು. ನಿಗೂಢವಾಗಿ ನಾಪತ್ತೆಯಾಗಿದ್ದ ವಾಸುದೇವ ಅಡಿಗ ಅವರ ಪ್ರಕರಣ ಪೊಲೀಸರಿಗೆ ಸವಾಲಿನದಾಗಿತ್ತು.
ವಾಸುದೇವ ಅಡಿಗ ಅವರು ಕಪ್ಪುಶಿಲೆ ಅಕ್ರಮ ಗಣಿಗಾರಿಕೆಯ ವಿರುದ್ಧ ಸಮರ ಸಾರಿದ್ದರು. ಅಲ್ಲದೆ ಉಡುಪಿ ನಿರ್ಮಿತಿ ಕೇಂದ್ರದ ಹಗರಣವನ್ನು ಅವರು ಬಯಲಿಗೆಳೆದಿದ್ದರು. ಈ ಹಿನ್ನೆಲೆಯಲ್ಲಿ ಅವರ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿತ್ತು. ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ದುಷ್ಟಶಕ್ತಿಗಳು ಈ ಕೊಲೆಯ ಹಿಂದಿರಬಹುದು ಎಂದು ಶಂಕಿಸಲಾಗಿತ್ತು.
ಆದರೆ, ವಾಸುದೇವ ಅಡಿಗ ಮತ್ತು ಅವರ ಪುಟ್ಟಪರ್ತಿ ಸಾಯಿಬಾಬಾನಂತೆ ಕೂದಲು ಬಿಟ್ಟಿರುವ ಜ್ಯೋತಿಷಿ ರಮೇಶ್ ಬಾಯರಿ ನಡುವಿನ ಜಮೀನು ಕಲಹವೇ ಈ ಕೊಲೆಗೆ ಕಾರಣ ಎಂಬುದು ಸುಬ್ರಮಣ್ಯ ಉಡುಪ ಅವರ ಬಂಧನದಿಂದ ಬಯಲಾಗಿದೆ. ಅಡಿಗ ಅವರನ್ನು ಜ.7ರಂದು ಅಪಹರಿಸಲಾಗಿತ್ತು. ಅವರ ದೇಹ ಜ.12ರಂದು ಕಡೂರು ಬಳಿಯ ಕಾಡಿನಲ್ಲಿ ಪತ್ತೆಯಾಗಿತ್ತು. ಸುಬ್ರಮಣ್ಯ ಉಡುಪ ಬೆಂಗಳೂರಿನಲ್ಲಿದ್ದು, ರಮೇಶ್ ಬಾಯರಿ ಅವರು ಉಡುಪ ಅವರ ಭಾವನೆಂಟರಾಗಿದ್ದಾರೆ.
ನ್ಯಾಯಾಲಯದಲ್ಲಿ ವಾಸುದೇವ ಅಡಿಗ ಅವರಿಗೆ ಜಯ ಲಭಿಸಿದ್ದರೂ, ರಮೇಶ್ ಬಾಯರಿ ಜಮೀನಿನ ಮೇಲೆ ತನ್ನ ಹಿಡಿತ ಸಾಧಿಸಿದ್ದ. ಇದರ ವಿರುದ್ಧ ವಾಸದೇವ ಅಡಿಗ ಅವರು ನ್ಯಾಯಾಲಯದಲ್ಲಿ ತಮ್ಮ ಹೋರಾಟ ಮುಂದುವರಿಸಿದ್ದರು. ಇದೇ ಅಡಿಗ ಅವರ ಕೊಲೆಗೆ ಕಾರಣವಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ವಾಸುದೇವ ಅಡಿಗ ಅವರು ಉಡುಪಿ-ಚಿಕ್ಕಮಗಳೂರು ಸಂಸದ ಜಯಪ್ರಕಾಶ್ ಹೆಗಡೆ ಅವರಿಗೆ ಆಪ್ತರಾಗಿದ್ದರು.












Click it and Unblock the Notifications