ಮಹಿಳಾ ದೌರ್ಜನ್ಯ : ನ್ಯಾ. ವರ್ಮಾ ಸಮಿತಿ ಶಿಫಾರಸು

ಮಹಿಳೆಯರಿಗೆ ಹೆಚ್ಚಿನ ಭದ್ರತೆ ಒದಗಿಸುವ ಉದ್ದೇಶದಿಂದ ಕಳೆದ ವರ್ಷದ ಡಿಸೆಂಬರಲ್ಲಿ ಮೂವರು ಸದಸ್ಯರ ಸಮಿತಿಯನ್ನು ಸ್ಥಾಪಿಸಲಾಗಿತ್ತು. ಎಲ್ಲ ಸಲಹೆಗಳನ್ನು ಸ್ವೀಕರಿಸಲು ಜನವರಿ 5 ಡೆಡ್ ಲೈನ್ ನೀಡಲಾಗಿತ್ತು. ಮಹಿಳಾ ಸಂಘಟನೆಗಳಿಂದ, ಜ್ಯೂರಿಗಳಿಂದ, ಮಹಿಳಾಪರ ವೇದಿಕೆಗಳಿಂದ 80 ಸಾವಿರಕ್ಕೂ ಹೆಚ್ಚು ಸಲಹೆಗಳು ಹರಿದುಬಂದಿದ್ದವು.
ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ವರ್ಮಾ, ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಮೂರ್ತಿ ಲೀಲಾ ಸೇಠ್, ಭಾರತದ ಮಾಜಿ ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣಿಯನ್ ಅವರಿದ್ದ ಸಮಿತಿ ಒಂದು ತಿಂಗಳಲ್ಲಿಯೇ ವರದಿಯನ್ನು ಸಲ್ಲಿಸಿದೆ.
ಮಹಿಳೆಯರ ಮೇಲೆ ನಡೆಯುತ್ತಿರು ಅತ್ಯಾಚಾರ, ಆಸಿಡ್ ದಾಳಿ, ಲೈಂಗಿಕ ಕಿರುಕುಳ, ವೇಶ್ಯಾವಾಟಿಕೆ, ಪ್ರಸ್ತುತ ಚಾಲ್ತಿಯಲ್ಲಿರುವ ಕಾನೂನು, ಆರೋಪಗಳನ್ನು ಎದುರಿಸುತ್ತಿರುವ ರಾಜಕಾರಣಿಗಳು, ಅಪರಾಧಿಗಳಿಗೆ ನೀಡುತ್ತಿರುವ ಶಿಕ್ಷೆಗೆ ಸಂಬಂಧಿಸಿದಂತೆ ಅನೇಕ ಶಿಫಾರಸನ್ನು ಸಮಿತಿ ಮಾಡಿದೆ. ಈ ವರದಿ ಉಳಿದ ವರದಿಗಳಂತೆ ಧೂಳು ತಿನ್ನುವುದಿಲ್ಲ ಎಂಬ ಆಶಯವನ್ನೂ ಸಮಿತಿ ವ್ಯಕ್ತಪಡಿಸಿದೆ.
ಮಹಿಳೆಯರ ಮೇಲೆ ಇಷ್ಟೊಂದು ದೌರ್ಜನ್ಯಗಳು ನಡೆಯುತ್ತಿದ್ದರೂ ಯಾವುದೇ ರಾಜ್ಯದ ಯಾವುದೇ ಪೋಲೀಸ್ ಮಹಾನಿರ್ದೇಶಕರಿಂದ ಒಂದೇ ಒಂದು ಸಲಹೆಯೂ ಬಂದಿಲ್ಲ ಎಂದು ನ್ಯಾ.ಜೆ.ಎಸ್.ವರ್ಮಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಯುವತಿಯ ಅತ್ಯಾಚಾರ ನಡೆದ ನಂತರ ದೆಹಲಿ ಪೊಲೀಸ್ ಆಯುಕ್ತರಿಗೆ ಗೃಹ ಸಚಿವರಿಂದ ಶಭಾಸ್‌ಗಿರಿ ಸಿಕ್ಕಿದ್ದರೆ ಅವರು ಅಚ್ಚರಿ ಮತ್ತು ಆಕ್ರೋಶ ವ್ಯಕ್ತಪಡಿಸಿದರು.
ಸಾಮೂಹಿಕ ಅತ್ಯಾಚಾರ ಮಾಡುವವರಿಗೆ ಮರಣ ದಂಡನೆ ವಿಧಿಸಬೇಕು ಮತ್ತು ಅತ್ಯಾಚಾರ ಎಸಗುವ ಬಾಲಾಪರಾಧಿಗಳ ವಯಸ್ಸಿನ ಮಿತಿಯನ್ನು ಇಳಿಸಬೇಕು ಎಂಬ ಕೂಗಿಗೆ ಸಮಿತಿ ಸೊಪ್ಪು ಹಾಕಿಲ್ಲ. ಆದರೆ, ಸಾಮೂಹಿಕ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಹೆಚ್ಚಿನ ಕಠಿಣ ಶಿಕ್ಷೆ ವಿಧಿಸಬೇಕೆಂದು ಶಿಫಾರಸು ಮಾಡಿದೆ.
ಸಮಿತಿ ಸಲ್ಲಿಸಿರುವ ವರದಿಯ ಮುಖ್ಯಾಂಶಗಳು ಇಂತಿವೆ
* ಈಗಿರುವ ಕಾನೂನನ್ನು ಸರಿಯಾಗಿ ಪಾಲಿಸಿದರೂ ಸಾಕು ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಟ್ಟಬಹುದು.
* ರಾಜಕಾರಣಿ ಆರೋಪ ಹೊತ್ತಿದ್ದರೆ ಕೂಡಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು.
* ಅತ್ಯಾಚಾರ ಅಥವಾ ಯತ್ನ ನಡೆದಾಗ ಮಹಿಳೆಯಿಂದ ಕೊಲೆಯಾದರೆ ಆತ್ಮರಕ್ಷಣೆಗಾಗಿ ನಡೆದ ಕೊಲೆ ಎಂದು ಪರಿಗಣಿಸಬೇಕು.
* ಅತ್ಯಾಚಾರ ಪ್ರಕರಣ ದಾಖಲಿಸದಿರುವುದು ಅಪರಾಧ.
* ಆಸಿಡ್ ದಾಳಿಗೆ ಹೊಸ ಕಾನೂನು ರೂಪಿಸಬೇಕು.
* ಉದ್ದೇಶಪೂರ್ವಕವಾಗಿ ಹೆಂಗಸರನ್ನು ಮುಟ್ಟುವುದನ್ನು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ತರಬೇಕು.
* ಮಹಿಳೆಯ ವಸ್ತ್ರಾಪಹರಣ ಮಾಡುವುದಕ್ಕೆ ಹೊಸ ನಿಮಯ ರೂಪಿಸಬೇಕು.
* ರೋಗದಿಂದ ನರಳುತ್ತಿರುವ ಹೆಂಗಸು, ಗರ್ಭಿಣಿಯರ ಮೇಲೆ ನಡೆಯುವ ದೌರ್ಜನ್ಯಕ್ಕೆ ಹೆಚ್ಚಿನ ಶಿಕ್ಷೆ.
* ಸಾಮೂಹಿಕ ಅತ್ಯಾಚಾರ, ಪೊಲೀಸರು, ಸೇನಾ ಸಿಬ್ಬಂದಿಯಿಂದ ಮತ್ತು ಸರಕಾರಿ ಅಧಿಕಾರಿಗಳಿಂದ ಬಲಾತ್ಕಾರ ನಡೆದರೆ ಹೆಚ್ಚಿನ ಶಿಕ್ಷೆ.
* ಅತ್ಯಾಚಾರಕ್ಕೊಳಗಾದ ಮಹಿಳೆಯ ಬಗ್ಗೆ ಪೊಲೀಸರು ಹೆಚ್ಚು ಸಂವೇದಿಯಾಗಿರಬೇಕು.
* ಎಗ್ಗುಸಿಗ್ಗಿಲ್ಲದೆ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ಇರುತ್ತದೆ, ಆದರೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.
* ಕಾಣೆಯಾಗುತ್ತಿರುವ ಮಕ್ಕಳ ಬಗ್ಗೆ ನಿಗಾ ಇಟ್ಟರೆ ಅತ್ಯಾಚಾರದಂತಹ ಘಟನೆಗಳು ಸಾಕಷ್ಟು ಕಡಿಮೆಯಾಗುತ್ತವೆ.
* ಸಾರ್ವಜನಿಕ ಸಾರಿಗೆ ಹೆಚ್ಚು ಭದ್ರತೆ ಒದಗಿಸಬೇಕು ಮತ್ತು ಬೀದಿ ದೀಪಗಳು ಉತ್ತಮ ಸ್ಥಿತಿಯಲ್ಲಿರಬೇಕು.
* ಸಲಹೆ, ಪ್ರತಿಭಟನೆ ನಡೆಸಿದ ಯುವಕರಿಗೆ ಆಭಾರಿಯಾಗಿದ್ದೇವೆ. ಅವರಿಲ್ಲದಿದ್ದರೆ ಇಂಥ ವರದಿ ಬರುತ್ತಿರಲಿಲ್ಲ ಎಂದಿದೆ ಸಮಿತಿ.












Click it and Unblock the Notifications