ರಾಜೀನಾಮೆ ಪ್ರಹಸನ : ಜ.23ರಂದು ಏನಾಗಲಿದೆ?

Resignation drama : What will happen on 23rd January
ಬೆಂಗಳೂರು, ಜ. 22 : ಶೋಭಾ ಕರಂದ್ಲಾಜೆ ಸೇರಿಸಿಕೊಂಡು ಬಿಜೆಪಿಯಲ್ಲಿರುವ 4 ಸಚಿವರು ಮತ್ತು 20ಕ್ಕೂ ಹೆಚ್ಚು ಶಾಸಕರಿಂದ ಜ.23ರಂದು ರಾಜೀನಾಮೆಯನ್ನು ಕೊಡಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದು, ಸೈಲೆಂಟಾಗಿಯೇ ದಾಳಗಳನ್ನು ಉರುಳಿಸಿದ್ದಾರೆ.

"ಇಂಧನ ಇಲಾಖೆ ನನ್ನದಲ್ಲ, ಇಲಾಖೆಯ ಅಧಿಕಾರಿಗಳು ನನ್ನ ಮಾತು ಕೇಳುತ್ತಿಲ್ಲ, ನನ್ನ ಸ್ಥಾನವನ್ನು 'ದೊಡ್ಡವರು' ತುಂಬಲಿದ್ದಾರೆ" ಎಂದು ತಮ್ಮ ಟ್ರೇಡ್ ಮಾರ್ಕ್ ನಗುವನ್ನು ಬಿಸಾಕುತ್ತಲೇ ವಿದಾಯ ಭಾಷಣ ಮಾಡಿರುವ ಶೋಭಾ ಕರಂದ್ಲಾಜೆ ಜ.23ರಂದು ರಾಜೀನಾಮೆ ನೀಡುವುದು ಹೆಚ್ಚೂಕಡಿಮೆ ಖಚಿತವಾಗಿದೆ. ಸಿಎಂ ಉದಾಸಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ ಕೂಡ ರಾಜೀನಾಮೆ ಬಿಸಾಕಲಿದ್ದಾರೆ ಎಂಬ ಮಾತು ಪ್ರತಿಧ್ವನಿಸುತ್ತಿವೆ.

ಇವರ ಜೊತೆಗೆ ಯಡಿಯೂರಪ್ಪ ಬೆಂಬಲಿಗರಾದ ಹಾವೇರಿ ಜಿಲ್ಲೆಯ ಶಾಸಕರು ನಾಳೆಯೇ ರಾಜೀನಾಮೆ ನೀಡುವುದು ನಿಶ್ಚಿತ ಎಂದು ನೆಹರೂ ಓಲೆಕಾರ್ ಹಾವೇರಿಯಲ್ಲಿ ಹೇಳಿದ್ದಾರೆ. ಯಡಿಯೂರಪ್ಪ ಕಟ್ಟಾ ಬೆಂಬಲಿಗರಾದ ಹರಿಹರದ ಶಾಸಕ ಬಿ.ಪಿ. ಹರೀಶ್ ಅವರು ಕೂಡ ತಾವು ಜ.23ರಂದು ರಾಜೀನಾಮೆ ನೀಡುವುದು ಶತಃಸಿದ್ಧ ಅಂತ ಗೋವಿನಾಳದಲ್ಲಿ ಹೇಳಿ, ಶೆಟ್ಟರ್ ಸರಕಾರವನ್ನು ಆತಂಕದ ಮಡುವಿನಲ್ಲಿ ತಳ್ಳಿದ್ದಾರೆ.

ಬಿಎಸ್‌ವೈ ಮನೆಯಲ್ಲಿ ಸಭೆ : ಡೆಡ್ ಲೈನ್ ಕೈಬಿಟ್ಟಿದ್ದೇನೆ, ಶೆಟ್ಟರ್ ಸರಕಾರವನ್ನು ಉರುಳಿಸುವುದಿಲ್ಲ ಎಂದು ಹೇಳುತ್ತಲೇ ಬಂದಿರುವ ಯಡಿಯೂರಪ್ಪ, ತಮ್ಮ ಎಲ್ಲ ಬೆಂಬಲಿಗರಿಗೆ ಬೆಂಗಳೂರಿನ ತಮ್ಮ ನಿವಾಸ ಧವಳಗಿರಿಗೆ ಕೂಡಲೆ ಬರಬೇಕೆಂದು ಆದೇಶಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಜ.23ರಂದು ಧವಳಗಿರಿಯಲ್ಲಿ ಕರ್ನಾಟಕ ಜನತಾ ಪಕ್ಷದ ಮಹತ್ವದ ಸಭೆ ನಡೆಯಲಿದೆ.

ಯಡಿಯೂರಪ್ಪ ಮನೆಯಲ್ಲಿ ಸಭೆ ನಡೆಸಿದ ನಂತರ ಮಧ್ಯಾಹ್ನ 1.30ಕ್ಕೆ ವಿಧಾನಸಭಾಧ್ಯಕ್ಷ ಕೆ.ಜೆ. ಬೋಪಯ್ಯ ಅವರಿಗೆ ಸಾಮೂಹಿಕವಾಗಿ ರಾಜೀನಾಮೆ ಸಲ್ಲಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಬೋಪಯ್ಯ ಸಿಗದಿದ್ದರೆ ರಾಜ್ಯಪಾಲರಿಗೇ ರಾಜೀನಾಮೆ ಪತ್ರ ಸಲ್ಲಿಸಲೂ ಚಿಂತನೆ ನಡೆಸಲಾಗಿದೆ.

ಎಲ್ಲ ಬೆದರಿಕೆ, ವಿರೋಧಗಳನ್ನು ಎದುರಿಸಿ ಜಗದೀಶ್ ಶೆಟ್ಟರ್ ಅವರು ಫೆ.8ರಂದು ರಾಜ್ಯ ಬಜೆಟ್ ಮಂಡಿಸಲು ಸಿದ್ಧತೆ ನಡೆಸಿರುವುದು ಕೆಜೆಪಿ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ. ಸರಕಾರ ಬಿದ್ದರೂ ಸರಿ ಯಾವುದೇ ಕಾರಣಕ್ಕೂ ಶೆಟ್ಟರ್ ಅವರಿಗೆ ಬಜೆಟ್ ಮಂಡಿಸಲು ಅವಕಾಶ ಮಾಡಿಕೊಡಬಾರದು ಎಂಬುದು ಅವರ ಹುನ್ನಾರವಾಗಿದೆ.

ಇದೆಲ್ಲದರ ಜೊತೆಗೆ, ಸರಕಾರ ಬೀಳಿಸುವ ಬಗ್ಗೆ ಯಡಿಯೂರಪ್ಪನವರೇ ಬಾಯಿಬಿಡದಿರುವುದು ಅನೇಕರ ಅಸಮಾಧಾನಕ್ಕೂ ಕಾರಣವಾಗಿದೆ. ಹಲವರಿಗೆ ಬಿಜೆಪಿಯಲ್ಲಿಯೂ ಇರುವ ಹಾಗಿಲ್ಲ, ಕೆಜೆಪಿಯನ್ನೂ ಸೇರುವ ಹಾಗಿಲ್ಲ ಎಂಬಂತಹ ದ್ವಂದ್ವ ಎದುರಾಗಿದೆ. ಕೆಜೆಪಿಯನ್ನು ಧಿಕ್ಕರಿಸಿ ಬಿಜೆಪಿಯಲ್ಲಿ ಉಳಿದರೂ ಮುಂದೆ ಈಗಿದ್ದ ಸ್ಥಾನಮಾನ ದಕ್ಕುವುದಿಲ್ಲ ಅಥವಾ ಸಂಪುಟದಲ್ಲಿ ಉನ್ನತ ಸ್ಥಾನಮಾನ ಸಿಗುವುದಿಲ್ಲ ಎಂಬ ಹೆದರಿಕೆ ಮನೆಮಾಡಿದೆ.

ಈ ಎಲ್ಲ ಸಂದೇಹಗಳಿಗೆ ಜ.23ರಂದು ಸೂಕ್ತವಾದ ಉತ್ತರ ದೊರೆಯುವ ಸಾಧ್ಯತೆಯಿದೆ. ಶೆಟ್ಟರ್ ಸರಕಾರ ಇರುವುದಾ, ಉರುಳುವುದಾ ಎಂಬ ಪ್ರಶ್ನೆಗೆ ಈ ರಾಜಕೀಯ ಪ್ರಹಸನವನ್ನು ನೋಡುತ್ತಿರುವ ರಾಜ್ಯದ ಜನತೆ ಜ.23ರಂದು ಉತ್ತರ ದೊರೆಯಲಿದೆ.

ಶೆಟ್ಟರ್ ಹಾರಿಕೆಯ ಉತ್ತರ : ಈ ನಡುವೆ, ಬಜೆಟ್ಟಿಗೆ ಪೂರ್ವಭಾವಿಯಾಗಿ ರೈತ ಮುಖಂಡರೊಡನೆ ಮಾತುಕತೆ ನಡೆಸಿದ ಜಗದೀಶ್ ಶೆಟ್ಟರ್ ಅವರು, ಸಚಿವರು ಮತ್ತು ಶಾಸಕರು ರಾಜೀನಾಮೆ ನೀಡುತ್ತಿರುವುದರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಬರ, ನೀರಿನ ಕೊರತೆ, ರೈತರ ಸಮಸ್ಯೆ, ಕುಗ್ಗುತ್ತಿರುವ ಅಂತರ್ಜಲ ಮಟ್ಟ ಎದುರಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನೇಕ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿರುವ ಅವರು, ಫೆ.8ರಂದು ಬಜೆಟ್ ಮಂಡಿಸುವುದು ಸತ್ಯ ಎಂದು ನುಡಿದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+