ಕಾಂಗ್ರೆಸ್ ಪಕ್ಷದತ್ತ ವಾಲಿದ ಶಂಕರ್ ಬಿದರಿ

ಇನ್ನೊಂದು ವಾರದಲ್ಲಿ ತನ್ನ ರಾಜಕೀಯ ನಡೆ ಸ್ಪಷ್ಟಪಡಿಸುತ್ತೇನೆ ಎಂದು ನಿಗೂಡಾರ್ಥದಲ್ಲಿ ಹೇಳಿದ್ದ ಶಂಕರ್ ಬಿದರಿ, ತಮ್ಮ ಭವಿಷ್ಯದ ರಾಜಕೀಯದ ಬಗ್ಗೆ ಒಂದೊಂದೇ ಸುಳಿವನ್ನು ಬಿಟ್ಟುಕೊಡುತ್ತಿದ್ದಾರೆ.
ನಿನ್ನೆ ತಮ್ಮ ಸೋದರನಿಂದ ಮುಂದಿನ ವಿಧಾನಸಭೆ ಚುನಾವಣೆ ಟಿಕೆಟ್ ಗಾಗಿ ಕಾಂಗ್ರೆಸಿನಿಂದ ಅರ್ಜಿ ಖರೀದಿಸಿದ್ದಾರೆ. ತನ್ಮೂಲಕ ಶಂಕರ್ ಬಿದರಿ ಕಾಂಗ್ರೆಸ್ ಪಾಲಾಗಲಿದ್ದಾರೆ ಎಂಬುದು ಅಗತ್ಯಕ್ಕಿಂತ ಹೆಚ್ಚು ಸ್ಪಷ್ಟವಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಬಿದರಿ ಅವರು ನಿನ್ನೆ ಸೋಮವಾರ ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಸುಮಾರು 1 ಗಂಟೆ ಕಾಲ ಚರ್ಚೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಬಿದರಿ ಬಾಗಲಕೋಟೆ ಜಿಲ್ಲೆಯ ತೆರೆದಾಳ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿದ್ದಾರೆ. ಈ ಕುರಿತು ಚರ್ಚಿಸಲು ಅವರು ಪರಮೇಶ್ವರ್ ಮನೆಗೆ ಭೇಟಿ ನೀಡಿದ್ದರು ಎಂದು ಮೂಲಗಳು ಹೇಳಿವೆ. ಈ ಹಿಂದೆ ಪರಮೇಶ್ವರ್ ಅವರೇ ಬಿದರಿ ಮನೆಗೆ ಉಪಹಾರದ ನೆಪದಲ್ಲಿ ಭೇಟಿ ನೀಡಿದ್ದರು.
ಬಿದರಿ ಕನ್ಸಲ್ಟೆಂಟ್ ಕಚೇರಿ: ಈ ಮಧ್ಯೆ, ಬಿದರಿ ಅವರು ಶಾಸಕರ ಭವನದಿಂದ ಕೂಗಳತೆಯ ದೂರದಲ್ಲಿರುವ ಬಸವ ಸಮಿತಿ ಭವನದಲ್ಲಿ ಖಾಸಗಿಯಾಗಿ ಒಂದು ಕಚೇರಿಯನ್ನು ತೆರೆದಿದ್ದಾರೆ. ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸಲು ''ಬಿದರಿ ಕನ್ಸಲ್ಟೆಂಟ್'' ಹೆಸರಿನ ಕಚೇರಿಯನ್ನು ತೆರೆದಿದ್ದು, ಅಧಿಕೃತವಾಗಿ ಜನವರಿ 27ರಂದು ಉದ್ಘಾಟನೆಯಾಗಲಿದೆ.












Click it and Unblock the Notifications