#Jaitley ಜತೆ ಬೆಂಗ್ಳೂರಲ್ಲಿ ಟ್ವಿಟ್ಟರ್ ಸಮಾವೇಶ

ಸಮಗ್ರ ವಿಕಾಸ ಎಂಬ ಲಾಭರಹಿತ ಸಂಸ್ಥೆಯ ಸಹಯೋಗದೊಂದಿಗೆ ಕರ್ನಾಟಕ ಬಿಜೆಪಿ ಟ್ವಿಟ್ಟರ್ ಮತ್ತು ಫೇಸ್ ಬುಕ್ ಸ್ನೇಹಿತರಿಗಾಗಿ ದೇಶಭಕ್ತಿ/ರಾಷ್ಟ್ರೀಯ ಸಮಾವೇಶವನ್ನು ಬೆಂಗಳೂರಿನಲ್ಲಿ ಜನವರಿ 20, ಭಾನುವಾರದಂದು ಹಮ್ಮಿಕೊಂಡಿದೆ. ಪ್ಯಾಲೇಸ್ ರಸ್ತೆಯಲ್ಲಿರುವ ಸೆಂಟ್ರಲ್ ಕಾಲೇಜು ಕ್ಯಾಂಪಸ್‌ನಲ್ಲಿರುವ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ.
ಜೇಟ್ಲಿ ಜೊತೆ ಸಂವಾದ : ಈ ಸಮಾವೇಶವನ್ನು ಉದ್ದೇಶಿಸಿ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ಅತ್ಯುತ್ತಮ ವಾಕ್ಪಟು ಎಂದು ಹೆಸರಾಗಿರುವ ಅರುಣ್ ಜೇಟ್ಲಿ ಅವರು, ದೇಶದ ಪ್ರಸ್ತುತ ರಾಜಕೀಯ, ಆರ್ಥಿಕ, ಭದ್ರತೆ ಪರಿಸ್ಥಿತಿಯ ಕುರಿತು ಮಾತನಾಡಲಿದ್ದಾರೆ. ನಂತರ ಅವರೊಂದಿಗೆ ಮುಕ್ತ ಮಾತುಕತೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.
ಸಂಸದ ಅರುಣ್ ಜೇಟ್ಲಿ ಅವರೊಂದಿಗೆ ಸಂವಾದ ಮಧ್ಯಾಹ್ನ 2.15ರಿಂದ 4 ಗಂಟೆಯವರೆಗೆ ನಡೆಯಲಿದೆ. ಸಂಜೆಯ ಚಹಾ ಬಿಡುವಿನ ನಂತರ ಬಿಜೆಪಿಯ ರಾಷ್ಟ್ರೀಯ ವಕ್ತಾರ ರವಿಶಂಕರ್ ಪ್ರಸಾದ್ ಅವರೊಂದಿಗೂ ಸಂವಾದ ನಡೆಸಲು ಅವಕಾಶವಿದೆ.
ಫೇಸ್ ಬುಕ್ ಮತ್ತು ಟ್ವಿಟ್ಟರ್ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಅತ್ಯಂತ ಸಕ್ರೀಯವಾಗಿರುವ ಮತ್ತು ಹಲವಾರು ಸ್ನೇಹಿತರನ್ನು ಗಳಿಸಿಕೊಂಡಿರುವ ಒನ್ಇಂಡಿಯಾ ಕನ್ನಡದ ಪ್ರತಿನಿಧಿ ಕೂಡ ಈ ಚರ್ಚಾಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಒನ್ಇಂಡಿಯಾ ಕನ್ನಡದ ಪ್ರತಿನಿಧಿಯನ್ನು ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ಭೇಟಿ ಮಾಡಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಬಹುದು.
ಸಮಾವೇಶ ಮಧ್ಯಾಹ್ನ 1 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ರಾಷ್ಟ್ರಗೀತೆ ನುಡಿಯುವ ಮುಖಾಂತರ ಸಮಾವೇಶಕ್ಕೆ ತೆರೆ ಬೀಳಲಿದೆ. ಈಗಾಗಲೆ ನೋಂದಾಯಿಸಿಕೊಂಡಿರುವ ಟ್ವೀಪಲ್ಸ್ (ಟ್ವಿಟ್ಟರ್ ಸ್ನೇಹಿತರು) ಗಳಿಗೆ ಮಾತ್ರ ಪ್ರವೇಶವಿರುತ್ತದೆ. ಹೆಚ್ಚಿನ ವಿವರಗಳು ಬೇಕಿದ್ದರೆ ಈ ಇಮೇಲ್ ವಿಳಾಸವನ್ನು ಸಂಪರ್ಕಿಸಬಹುದು : [email protected]
ಸಮಗ್ರ ವಿಕಾಸ ಸಂಸ್ಥೆಯ ಬಗ್ಗೆ : ಸ್ವಾವಲಂಬನೆಯ ಮೂಲ ಉದ್ದೇಶ ಇಟ್ಟುಕೊಂಡು 2011ರಲ್ಲಿ ಸಮಗ್ರ ವಿಕಾಸ ಟ್ರಸ್ಟ್ ಎಂಬ ಲಾಭ ರಹಿತ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಹುಟ್ಟುಹಾಕಲಾಗಿದೆ. ಯುವಕರಿಗಾಗಿ ಔದ್ಯೋಗಿಕ ಮಾರ್ಗದರ್ಶನ, ಯೋಗ, ವೇದಿಕ್ ಗಣಿತ, ಪಾಲಕರಿಗೆ ಸಲಹೆ ಮುಂತಾದ ಕಾರ್ಯಕ್ರಮಗಳನ್ನು ಈ ಸಂಸ್ಥೆ ನಡೆಸಿಕೊಂಡು ಬರುತ್ತಿದೆ.












Click it and Unblock the Notifications