ವಿಜಯನಗರ: ಮಾಜಿ ACP ಮನೆಯಲ್ಲಿ 50 ಲಕ್ಷ ದರೋಡೆ

ಇದುವೇ ಸುಸಮಯವೆಂದು ಭಾವಿಸಿದ ಕಳ್ಳರ ಗ್ಯಾಂಗ್, ವಿಜಯನಗರದಲ್ಲಿರುವ ನಿವೃತ್ತ ACP ಜಿಆರ್ ಪರಮೇಶ್ವರಪ್ಪ ಅವರ ಮನೆಗೆ ನುಗ್ಗಿದವರೇ 50 ಲಕ್ಷ ರೂ. ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ದೋಚಿಹೋಗಿದ್ದಾರೆ.
ನಿವೃತ್ತ ಪೊಲೀಸ್ ಅಧಿಕಾರಿ ಪರಮೇಶ್ವರಪ್ಪ ಅವರು ಮಗನನ್ನು ನೋಡಿಕೊಂಡು ಬರಲು ವಿದೇಶಕ್ಕೆ ಹೋಗಿದ್ದಾಗ ಕಳ್ಳರು ಇತ್ತ ತಮ್ಮ ಕರಾಮತ್ತು ತೋರಿದ್ದಾರೆ. 'ನಿಮ್ಮ ಮನೆಯಲ್ಲಿ ಹೀಗೆ ಕಳ್ಳತನವಾಗಿದೆ' ಎಂದು ಪೊಲೀಸರು ಸುದ್ದಿ ಮುಟ್ಟಿಸುತ್ತಿದ್ದಂತೆ ಪರಮೇಶ್ವರರು ಎದ್ನೋ ಬಿದ್ನೋ ಎಂದು ಬೆಂಗಳೂರಿನತ್ತ ಧಾವಿಸಿದ್ದಾರೆ.
'ನಮ್ಮ ಮನೆಯಲ್ಲಿ ದರೋಡೆ ನಡೆದಿದೆ ಎಂಬುದನ್ನು ತಿಳಿದು ಆಘಾತವಾಯಿತು. ದರೋಡೆ ಘಟನೆ ನಡೆಯುವಾಗ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್, ಸೇವಕ ಮತ್ತು ತೋಟದ ಮಾಲಿ ಇದ್ದರು. ಆದರೆ ಅವರ ಬಗ್ಗೆ ನನಗೆ ಸಂಪೂರ್ಣ ನಂಬಿಕೆ ಇದೆ. ಸುಮಾರು ವರ್ಷಗಳಿಂದ ಅವರು ನನ್ನ ಮನೆಯಲ್ಲಿ ಕೆಲಸದಲ್ಲಿದ್ದಾರೆ' ಎಂದು ನಿವೃತ್ತ ACP ಪರಮೇಶ್ವರಪ್ಪಪ್ರತಿಕ್ರಿಯಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ ಪರಮೇಶ್ವರಪ್ಪ ಮನೆಯಲ್ಲಿ ಇದೇ ಮೊದಲ ದರೋಡೆ ಅಲ್ವಂತೆ. ಈ ಹಿಂದೆಯೂ ಅನೇಕ ಬಾರಿ ದರೋಡೆ ಯತ್ನಗಳು ನಡೆದಿದ್ದವು ಎಂದು ಸ್ವತಃ ಪರಮೇಶ್ವರರೇ ತಿಳಿಸುತ್ತಾರೆ. ಪರಮೇಶ್ವರಪ್ಪ ಅವರ ಮತ್ತೊಬ್ಬ ಪುತ್ರ ಡಾ. ಜಿಪಿ ಜಿತೇಂದ್ರ ಕುಮಾರ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ದರೋಡೆಯ ಹಿಂದೆ ನೇಪಾಳಿ ಗ್ಯಾಂಗ್ ಇರಬಹುದು ಎಂದು ವಿಜಯನಗರ ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications