ಸ್ಪಂದನ ವಾಹಿನಿ ವರದಿಗಾರನ ಮೇಲೆ ಹಲ್ಲೆ

ಸ್ಪಂದನ ವಾಹಿನಿಯು ಕಳೆದ 12.01.2012 ರಂದು ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಅವ್ಯಾಹತವಾಗಿ ಬೆಳೆಯುತ್ತಿರುವ ಮಟ್ಕಾ ದಂಧೆಯ ಕುರಿತ ಆಘಾತಕಾರಿ ವಿಷಯಗಳನ್ನ ಬಯಲಿಗೆಳೆದಿತ್ತು. ಈ ರಹಸ್ಯ ಕಾರ್ಯಾಚರಣೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಮಟ್ಕಾ ಜೂಜನ್ನ ಎಗ್ಗು ಸಿಗ್ಗಿಲ್ಲದೇ ನಡೆಸುತ್ತಿರುವ ವಿಡೀಯೋ ಚಿತ್ರಿಕೆಗಳನ್ನ ಪ್ರಸಾರ ಮಾಡಿತ್ತು.
ಸ್ಪಂದನದ ಈ ಸಮಾಜಮುಖೀ ಕಾರ್ಯಕ್ಕೆ ಉಭಯ ಜಿಲ್ಲೆಗಳಿಂದ ಅಭೂತಪೂರ್ವ ಜನಸ್ಪಂದನ ವ್ಯಕ್ತವಾಗಿತ್ತು. ಆದರೆ, ನಿನ್ನೆ 15.01.2012 ರಂದು ಮಟ್ಕಾ ದಂಧೆಯನ್ನ ನಡೆಸುತ್ತಿರುವ ಕೆಲ ಮಂದಿ ಸ್ಪಂದನದ ವರದಿಗಾರ ಪ್ರಭಾಕರ್ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯನ್ನ ಒಡ್ಡಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿದೆ.
ಮಟ್ಕಾದಂಥ ಕಾನೂನುಬಾಹಿರ ದಂಧೆಯನ್ನ ಕೂಡಲೇ ನಿಲ್ಲಿಸಬೇಕು ಮತ್ತು ನಮ್ಮ ವರದಿಗಾರದ ಮೇಲೆ ದಾಳಿ ಮಾಡಿದ ತಂಡವನ್ನ ಬಂಧಿಸಬೇಕು ಎಂದು ಸ್ಪಂದನ ವಾಹಿನಿಯ ಸಿಬ್ಬಂದಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ನಂತರ ಉಡುಪಿಯ ಎಸ್.ಪಿ ಬೋರಲಿಂಗಯ್ಯ ಅವರಿಗೆ ಮನವಿ ಸಲ್ಲಿಸಲಾಗಿದೆ.
ಇತ್ತೀಚೆಗೆ ಉಡುಪಿನಗರ ಠಾಣೆಯ ಪೊಲೀಸ್ ಉಪನಿರೀಕ್ಷಕ ಲಿಂಗರಾಜು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಸಿಕ್ಕಿಬಿದ್ದ ಮಟ್ಕಾ ದಂಧೆಯಲ್ಲಿ 1 ರು ಕಟ್ಟಿದರೆ 70 ರು ಸಿಗುವ ಜುಗಾರಿ ನಡೆದಿತ್ತು ಎಂಬ ವಿಷಯ ಬೆಳಕಿಗೆ ಬಂದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕರ್ ಹಾಗೂ ರಾಘು ಎಂಬುವರನ್ನು ಪೊಲೀಸರು ಬಂಧಿಸಿದ್ದರು.ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ ಸಂಖ್ಯೆ 16/2013 ಕಲಂ.78(1)(ಎ)(3) ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಮಟ್ಕಾ ಎಂಬ ಜೂಜಾಟ ಹುಟ್ಟಿದ್ದು ಮುಂಬೈನಲ್ಲಿ ಹಾಗೂ ಹೆಚ್ಚಾಗಿ ಚಾಲ್ತಿಯಲ್ಲಿರುವುದು ಸಹ ಮುಂಬೈನ ಕುಖ್ಯಾತ ಗಲ್ಲಿಗಳಲ್ಲಿ ಮಾತ್ರ. ಆದರೆ, ಮಟ್ಕಾ ಬೇರೆ ಬೇರೆ ರೀತಿಯಲ್ಲಿ ದೇಶದೆಲ್ಲೆಡೆ ಅನಧಿಕೃತವಾಗಿ ಚಾಲ್ತಿಯಲ್ಲಿದೆ.
2 ಅಥವಾ 3 ಅಂಕಿಗಳ ಸಂಖ್ಯೆಯೊಂದರ ಮೇಲೆ ಪಂಟರ್ ಗಳು ಹಣ ಹೂಡಿ ಬೆಟ್ ಕಟ್ಟುತ್ತಾರೆ. ಗೆಲ್ಲುವ ಸಂಖ್ಯೆ ಉಳ್ಳವನಿಗೆ ಹಾಕಿದ ಮೊತ್ತದ 8 ಪಟ್ಟು ಹಣ ಸಿಗುತ್ತದೆ. ಕೆಲವೆಡೆ ಬೇರೆ ನಿಯಮಗಳನ್ನು ಅನುಸರಿಸಲಾಗುತ್ತದೆ.












Click it and Unblock the Notifications