ಬಿಎಸ್‌ವೈ ಡೆಡ್ ಲೈನ್ ಆಯ್ತು, ಈಗ ಓಲೇಕಾರ ಸರದಿ
ಹಾವೇರಿ, ಜ.16: ಕಟ್ಟಾಳುಗಳು ಕೈಕೊಟ್ಟಿದ್ದರಿಂದ ಬೇಸತ್ತು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್ ಸರಕಾರಕ್ಕೆ ಇನ್ನು ಡೆಡ್ ಲೈನ್ ನೀಡೋಲ್ಲ ಎಂದು ಪ್ರಕಟಿಸಿರುವ ಬೆನ್ನಲ್ಲೇ...
ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ ಯಡಿಯೂರಪ್ಪ ಅವರನ್ನು ನುಗ್ಗೇಮರ ಹತ್ತಿಸಿದ್ದ ಮತ್ತೊಬ್ಬ ಕಟ್ಟಾಳು ನೆಹರೂ ಓಲೇಕಾರ ಅವರು ಜ.23ಕ್ಕೆ ಮತ್ತೊಂದು ಡೆಡ್ ಲೈನ್ ಘೋಷಿಸಿದ್ದಾರೆ. ಅಂದಹಾಗೆ, ಓಲೇಕಾರ ನೆಹರೂ ಚನ್ನಬಸಪ್ಪ ಅವರು ಹಾವೇರಿ ಮೀಸಲು (ಎಸ್ಸಿ) ಕ್ಷೇತ್ರದ ಬಿಜೆಪಿಯ ಹಾಲಿ ಶಾಸಕ.

ನೋಡ್ತಿರಿ ಮುಂದಿನ ವಾರದಷ್ಟತ್ತಿಗೆ ( 23ಕ್ಕೆ) ಯಡಿಯೂರಪ್ಪನವರ ಅಷ್ಟೂ ಬೆಂಬಲಿಗ ಸಚಿವರು, ಶಾಸಕರು ಹೋಲ್ ಸೇಲ್ ನಲ್ಲಿ ರಾಜೀನಾಮೆ ನೀಡಲಿದ್ದಾರೆ. ಈ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹಾವೇರಿಯಲ್ಲಿ ಅವರು ನಿನ್ನೆ ಹೇಳಿದ್ದಾರೆ.
ಹಾವೇರಿಯ ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ 14 ಮಂದಿ ಶಾಸಕರು ಹಾಗೂ ಲೋಕೋಪಯೋಗಿ ಸಚಿವ ಸಿಎಂ ಉದಾಸಿ, ಇಂಧನ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಅಬಕಾರಿ ಸಚಿವ ರೇಣುಕಾಚಾರ್ಯ ಸೇರಿದಂತೆ ಇನ್ನಿತರರು ಜ. 23ರಂದು ತಮ್ಮ ಶಾಸಕ ಸ್ಥಾನ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಲಿದ್ದಾರೆ ಎಂಬುದು ಬಿಎಸ್‌ವೈ ಆಪ್ತ, ಬಿಜೆಪಿ ಶಾಸಕ ನೆಹರೂ ಓಲೇಕಾರ ಅವರ ಭವಿಷ್ಯವಾಣಿ.
ಬೊಮ್ಮಾಯಿ ರಾಜೀನಾಮೆ ನೀಡೊಲ್ಲ:
ಇದು ಮೊದಲ ಹಂತದ ಕಾರ್ಯಾಚರಣೆ. ಬಳಿಕ, ಉಳಿದ (70-14) ಬೆಂಬಲಿಗ ಶಾಸಕರೂ ರಾಜೀನಾಮೆ ಸಲ್ಲಿಸಲಿದ್ದಾರಂತೆ. ಇಂಟರೆಸ್ಟಿಂಗ್ ಅಂದರೆ ನೀರಾವರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಸದ್ಯಕ್ಕೆ ರಾಜೀನಾಮೆ ನೀಡೊಲ್ಲ ಎಂದು ಖುದ್ದು ಓಲೆಕಾರ್ ಅವರೇ ಹೇಳಿದ್ದಾರೆ. ಕೆಲವೊಂದು ಸಮಸ್ಯೆಗಳಿವೆ. ಅವೆಲ್ಲ ಬಗೆಹರಿದ ಬಳಿಕ ಬೊಮ್ಮಾಯಿ ರಾಜೀನಾಮೆ ನೀಡುವುದು ಖಚಿತ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಆದರೆ ಯಡಿಯೂರಪ್ಪಗೆ ನಿಷ್ಠೆ ತೋರಿ ಜೆಡಿಯುನಿಂದ ಬಿಜೆಪಿಗೆ ಹಾರಿ ಬಂದು ಅದೇ ಯಡಿಯೂರಪ್ಪ ಕೃಪಾಕಟಾಕ್ಷದಿಂದ ಸಚಿವ ಸ್ಥಾನವನ್ನೂ ಗಿಟ್ಟಿಸಿದ ಬಸವರಾಜ ಬೊಮ್ಮಾಯಿಗೆ ಈಗ ಯಡಿಯೂರಪ್ಪ ಬೇಡವಾಗಿದ್ದಾರೆ ಅನ್ನುವುದಕ್ಕಿಂತ ಜಗದೀಶ್ ಶೆಟ್ಟರ್ ಅವರೇ ಆಪ್ಯಾಯಮಾನವಾಗಿ ಕಂಡುಬಂದಿದ್ದಾರೆ.
ಅದರಲ್ಲೂ ಬಿಜೆಪಿ ವರಿಷ್ಠರು ಜಗದೀಶ್ ಶೆಟ್ಟರ್ ಅವರ ನಾಯಕತ್ವಕ್ಕೆ ಮಣೆ ಹಾಕಿದ ಮೇಲಂತೂ ಯಡಿಯೂರಪ್ಪಗೆ 'ನಾ ಒಲ್ಲೆ, ಬರಲೊಲ್ಲೆ' ಎನ್ನುತ್ತಿದ್ದಾರೆ ಎಂಬುದು ಗಮನಾರ್ಹ.
ಆದರೆ ಹಾಗಾಗುವುದು ಡೌಟು, ಒಬ್ಬ ಶೋಭಾರನ್ನು ಬಿಟ್ಟು ಮತ್ಯಾರೂ ತತ್ ಕ್ಷಣಕ್ಕೆ KJPಯತ್ತ ನುಸುಳುವ ಲಕ್ಷಣಗಳು ಗೋಚರಿಸುತ್ತಿಲ್ಲ. ಜ. 23ರಂದು ಇತ್ತ ಯಡಿಯೂರಪ್ಪ ಬೆಂಬಲಿಗರು ರಾಜೀನಾಮೆ ನೀಡುತ್ತಿದ್ದಂತೆ ಅತ್ತ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದ ಸರಕಾರ ಅಲ್ಪಮತಕ್ಕೆ ಕುಸಿದು ಬೀಳಲಿದೆ. ಹಾಗಾಗಿ ಶೆಟ್ಟರ್ ಬಜೆಟ್ ಮಂಡಿಸುವುದಕ್ಕೆ ಅವಕಾಶವೇ ಇರುವುದಿಲ್ಲ ಎಂದು ನೆಹರೂ ಓಲೇಕಾರ ಎಚ್ಚರಿಕೆ ನೀಡಿದ್ದಾರೆ.
ಈ ಮಧ್ಯೆ, ಕೆಜೆಪಿ ಮುಖಂಡ ವೇಣೂರು ಧನಂಜಯ್ ಕುಮಾರ್ ಆಳ್ವಾ ಅವರು ಫೆ. 15 ಕ್ಕೆ ಜಗದೀಶ್ ಶೆಟ್ಟರ್ ಸರಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿದ್ದಾರೆ.












Click it and Unblock the Notifications