ಶ್ರೀಗಳ ಆರೋಗ್ಯ ಸ್ಥಿತಿ ಬಗ್ಗೆ ಬಿಜಿಎಸ್ ವೈದ್ಯರ ಸುದ್ದಿಗೋಷ್ಠಿ

ಕೆಂಗೇರಿ ಸಮೀಪದ ಬಾಲಗಂಗಾಧರನಾಥ ಸ್ವಾಮೀಜಿ ಆಸ್ಪತ್ರೆ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವ ಆರ್ ಅಶೋಕ್, ಆದಿ ಚುಂಚನಗಿರಿ ಮಠದ ಕಿರಿ ಸ್ವಾಮೀಜಿ ಶೇಖರ್, ಬಿಜಿಎಸ್ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಇದೀಗ ಬಂದ ಸುದ್ದಿ: 6.30ರ ಸುಮಾರಿಗೆ ಸ್ವಾಮೀಜಿಗಳಿಗೆ ಮತ್ತೊಮ್ಮೆ ಎದೆನೋವು ಕಾಣಿಸಿಕೊಂಡಿದ್ದು, ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಆಗಮಿಸಿದ್ದು, ಆಸ್ಪತ್ರೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಸಂಸದ ಅನಂತ್ ಕುಮಾರ್ ಅವರು ಆಸ್ಪತ್ರೆಗೆ ಆಗಮಿಸಿದ್ದಾರೆ.[ ಸ್ವಾಮೀಜಿಗಳು ವಿಧಿವಶ ಸುದ್ದಿ ಓದಿ]
ಸ್ವಾಮೀಜಿಗಳ ಆರೋಗ್ಯದ ಬಗ್ಗೆ ಗಾಳಿಸುದ್ದಿಗಳು ಹಬ್ಬಿದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಬೇಕಾಯಿತು. ಸ್ವಾಮೀಜಿಗಳ ಆರೋಗ್ಯದ ಬಗ್ಗೆ ಯಾವುದೇ ಆತಂಕ ಬೇಡ ಎಂದು ಬಿಜಿಎಸ್ ಆಸ್ಪತ್ರೆ ಉಪ ನಿರ್ದೇಶಕ ಡಾ. ವೆಂಕಟರಮಣ ಹೇಳಿದರು.
ಸ್ವಾಮೀಜಿಗೆ ಹೃದ್ರೋಗ ಚಿಕಿತ್ಸೆ: ಶನಿವಾರ ಸಂಜೆ ಸ್ವಾಮೀಜಿಗಳು ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಸ್ವಲ್ಪ ಸ್ವಲ್ಪ ಎದೆ ನೋವು ಇತ್ತು. ಬಿಪಿ ಸ್ವಲ್ಪ Low ಇತ್ತು. ಭಾನುವಾರ ಬೆಳಗ್ಗೆ BP ಸ್ವಲ್ಪ ಏರಿಕೆ ಕಂಡು ಬಂದಿತ್ತು.
ನಿಮಗೆಲ್ಲ ಗೊತ್ತಿರುವಂತೆ ಕಳೆದ ನಾಲ್ಕು ವರ್ಷಗಳಿಂದ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಕಿಡ್ನಿ, ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳಿದೆ. ಬೈಪಾಸ್ ಚಿಕಿತ್ಸೆ ಯಶಸ್ವಿಯಾಗಿ ನಡೆಸಲಾಗಿದೆ. ಮೂರು ಬಾರಿ ಆಂಜಿಯೋಪಾಸ್ಟಿ ಸರ್ಜರಿ ಮಾಡಲಾಗಿದೆ ಎಂದು ಡಾ. ವೆಂಕಟರಮಣ ಹೇಳಿದರು.
ಸದ್ಯ ಬಿಜಿಎಸ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಸ್ವಾಮೀಜಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸ್ವಾಮೀಜಿಗಳು visitors ಜೊತೆ ಮಾತನಾಡಿದ್ದಾರೆ. ಅಶೋಕ್ ಅವರು 5 ನಿಮಿಷ ಮಾತುಕತೆ ನಡೆಸಿದ್ದಾರೆ. ನಾರಾಯಣ ಹೃದಯಾಲಯ, ಜಯದೇವ ಆಸ್ಪತ್ರೆ ನುರಿತ ವೈದ್ಯಾಧಿಕಾರಿಗಳು ಬಿಜಿಎಸ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಗಾಳಿಸುದ್ದಿಗೆ ಕಿವಿಗೊಡಬೇಡಿ. ಸ್ವಾಮೀಜಿಗಳಿಗೆ ತಗುಲಿರುವ ಸೋಂಕು(infection) ಕಮ್ಮಿಯಾದ ಅವರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡು ಬರಲಿದೆ. ಇನ್ನೂ 4-5 ದಿನಗಳಲ್ಲಿ ಮತ್ತೆ ಮೊದಲಿನಂತೆ ಚಟುವಟಿಕೆಗಳಲ್ಲಿ ತೊಡಗಬಹುದಾಗಿದೆ ಎಂದು ವೆಂಕಟರಮಣ ಅವರು ಆಶಯ ವ್ಯಕ್ತಪಡಿಸಿದರು. ಒನ್ ಇಂಡಿಯಾ ಕನ್ನಡ ತಂಡ ಕೂಡಾ ಸ್ವಾಮೀಜಿಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತದೆ.
ಗಂಗಾಧರಯ್ಯ ಎಂಬ ಮೂಲ ನಾಮ ಹೊಂದಿದ್ದ ಬಾಲಗಂಗಾಧರನಾಥ ಸ್ವಾಮೀಜಿಗಳು ನಾಥ ಪರಂಪರೆಯ 71ನೇ ಗುರುಗಳಾಗಿ ಮಂಡ್ಯ ಜಿಲ್ಲೆ ನೆಲಮಂಗಲ ತಾಲೂಕಿನ ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿ 24, ಸೆಪ್ಟೆಂಬರ್ 1974ರಂದು ದೀಕ್ಷೆ ಸ್ವೀಕರಿಸಿದರು.
ಆದಿಚುಂಚನಗಿರಿ ಟ್ರಸ್ಟ್ ಹೆಸರಿನಲ್ಲಿ ಶಾಲೆ, ಕಾಲೇಜು, ಆಸ್ಪತ್ರೆ, ಪರಿಸರ ಸಂರಕ್ಷಣೆ, ಪ್ರಾಣಿ ಸಂರಕ್ಷಣೆ, ವೇದ್ಯಾಧ್ಯಯನ, ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿ ಚಟುವಟಿಕೆಯಲ್ಲಿ ಬಾಲಗಂಗಾಧರ ಸ್ವಾಮೀಜಿಗಳು ತೊಡಗಿದ್ದಾರೆ. ಭಾರತದ ಮೂರನೇ ಅತಿದೊಡ್ಡ ನಾಗರೀಕ ಗೌರವವಾದ ಪದ್ಮಭೂಷಣ ಪ್ರಶಸ್ತಿಗೆ ಶ್ರೀಗಳು 2010ರಲ್ಲಿ ಭಾಜನರಾಗಿದ್ದಾರೆ.












Click it and Unblock the Notifications