ಬಾಲಗಂಗಾಧರನಾಥ ಸ್ವಾಮೀಜಿ ತೀವ್ರ ಅಸ್ವಸ್ಥ

ಕೆಲ ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ಎಂದಿನಂತೆ ಡಯಾಲಿಸಿಸ್ ಗಾಗಿ ಬಿಜಿಎಸ್ ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಭಾನುವಾರ (ಜ.13) ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡು ಬಂದಿದೆ.
ಡಯಾಲಿಸಿಸ್ ನಂತರ ಸ್ವಾಮೀಜಿಗಳು ಚಿಕಿತ್ಸೆಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಆದರೆ, ಇವತ್ತು ಸ್ವಾಮೀಜಿಗಳ ರಕ್ತದೊತ್ತಡದಲ್ಲಿ ತೀವ್ರವಾಗಿ ಏರುಪೇರು ಕಂಡು ಬಂದಿದೆ.
ಸದ್ಯಕ್ಕೆ ತೀವ್ರ ನಿಗಾ ಘಟಕದಲ್ಲಿ ಸ್ವಾಮೀಜಿ ಅವರಿಗೆ ನುರಿತ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹೆಚ್ಚಿನ ವಿವರಗಳನ್ನು ಸುದ್ದಿಗೋಷ್ಠಿಯಲ್ಲಿ ವಿಷದಪಡಿಸಲಾಗುತ್ತದೆ ಎಂದು ಬಿಜಿಎಸ್ ಆಸ್ಪತ್ರೆ ವಕ್ತಾರರು ಹೇಳಿದರು.
ಗಣ್ಯರ ಕಳವಳ: ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆ ಕಡೆಗೆ ಗಣ್ಯರ ದಂಡು ಹರಿದು ಬರುತ್ತಿದೆ. ಉಪ ಮುಖ್ಯಮಂತ್ರಿ ಆರ್ ಅಶೋಕ್ ಅವರು ಆಸ್ಪತ್ರೆಗೆ ಧಾವಿಸಿ, ಶ್ರೀಗಳ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಕೇಂದ್ರ ಸಚಿವ ವೀರಪ್ಪ ಮೊಯ್ಲಿ, ಜಯದೇವ ಆಸ್ಪತ್ರೆ ಮುಖ್ಯಸ್ಥ ಡಾ. ಸಿ.ಎನ್ ಮಂಜುನಾಥ್, ಸಚಿವ ಸೋಮಣ್ಣ, ಸಂಸದ ಚೆಲುವರಾಯ ಸ್ವಾಮಿ ಕೂಡಾ ಆಸ್ಪತ್ರೆ ಬಳಿ ಕಾಣಿಸಿಕೊಂಡಿದ್ದಾರೆ.
ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ವೈದ್ಯರೊಡನೆ ಸತತ ಸಂಪರ್ಕದಲ್ಲಿದ್ದು, ಮಾಹಿತಿ ಪಡೆಯುತ್ತಿದ್ದಾರೆ. ಈ ಕ್ಷಣದ ಮಾಹಿತಿ ಪ್ರಕರಣ ಶ್ರೀಗಳ BP ನಿಯಂತ್ರಣಕ್ಕೆ ತರಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಬೆಳಗಾವಿ-ಧಾರವಾಡ ಪ್ರವಾಸವನ್ನು ಮೊಟಕುಗೊಳಿಸಿ ವಿಶೇಷ ವಿಮಾನದಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಡೆಗೆ ಧಾವಿಸುತ್ತಿರುವ ಸುದ್ದಿ ಸಿಕ್ಕಿದೆ.
ಈ ಸಂದರ್ಭದಲ್ಲಿ ಜನರು ತಾಳ್ಮೆಯಿಂದಬೇಕು. ಸ್ವಾಮೀಜಿಗಳ ಆರೋಗ್ಯ ಸುಧಾರಿಸುತ್ತಿದೆ. ಶಿಷ್ಯರು, ಅಭಿಮಾನಿ ವರ್ಗಗಳ ಶುಭ ಹಾರೈಕೆಯಿಂದ ಸ್ವಾಮೀಜಿಗಳು ಚೇತರಿಸಿಕೊಳ್ಳುತ್ತಾರೆ ಎಂದು ಸಂಸದ ಚೆಲುವರಾಯಸ್ವಾಮಿ ಹೇಳಿದ್ದಾರೆ.
ಸ್ವಾಮೀಜಿಗಳದ್ದು ತಾಯಿ ಹೃದಯ. ನಮ್ಮನ್ನೆಲ್ಲ ಬೆಳೆಸಿದವರು. ಅವರ ಸಾಧನೆ ಹಿರಿದಾದುದು. ಎಲ್ಲಾ ವರ್ಗದ ಏಳಿಗೆಗಾಗಿ ಶ್ರಮಿಸುತ್ತಿರುವ ಮಹಾನ್ ಚೇತನ ಎಂದು ಸಚಿವ ವಿ ಸೋಮಣ್ಣ ಹೇಳಿದರು.












Click it and Unblock the Notifications