ಸುಪ್ರೀಂಕೋರ್ಟಿನಲ್ಲಿ ಶಂಕರ್ ಬಿದರಿಗೆ ಜಯ

ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಫ್ತಾಬ್ ಆಲಂ ಮತ್ತು ನ್ಯಾ. ಸಿ.ಕೆ. ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಮಾಜಿ ಡಿಜಿ ಐಜಿಪಿ ಶಂಕರ್ ಬಿದರಿ ಅವರ ಪರವಾಗಿ ತೀರ್ಪು ನೀಡಿದ್ದು, ಬಿದರಿ ಅವರಿಂದ ಯಾವುದೇ ಮಾನವ ಹಕ್ಕು ಉಲ್ಲಂಘನೆ ಆಗಿಲ್ಲ, ಅವರನ್ನು ಪೊಲೀಸ್ ಮಹಾನಿರ್ದೇಶಕ ಹುದ್ದೆಗೆ ಅನರ್ಹರನ್ನಾಗಿ ಮಾಡಿದ್ದು ತಪ್ಪು ಎಂದು ತೀರ್ಪು ನೀಡಿದೆ.
ತೀರ್ಪ ಹೊರಬಿದ್ದ ಮೇಲೆ ಮಾಧ್ಯಮಗಳೊಂದಿಗೆ ತಮ್ಮ ಸಂತಸ ಹಂಚಿಕೊಂಡ ಶಂಕರ್ ಬಿದರಿ ಅವರು, ಇದು ಸತ್ಯಕ್ಕೆ ಸಂದ ಜಯ. ಇದು ನನಗೆ ಮಾತ್ರವಲ್ಲ ನನ್ನ ಜೊತೆ ಹೋರಾಟ ಮಾಡಿ ಅಸುನೀಗಿದ 150ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ಕಾನ್‌ಸ್ಟೇಬಲ್‌ಗಳು, ಅರಣ್ಯ ಸಿಬ್ಬಂದಿಗಳಿಗೆ ಸಿಕ್ಕ ಜಯ. ಈ ಜಯದಿಂದ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆಂದು ಭಾವಿಸುತ್ತೇನೆ ಎಂದು ಭಾವುಕರಾಗಿ ಕಣ್ಣೀರುಗರೆದರು.
ಸೇವಾ ಹಿರಿತನ ಮತ್ತು ಉತ್ತಮ ಸೇವಾ ದಾಖಲೆಗಳ ಆಧಾರದ ಮೇಲೆ ಇನ್ಫಾಂಟ್ ಅವರಿಗೆ ಸಿಗಬೇಕಿದ್ದ ಸ್ಥಾನವನ್ನು ಸ್ವಜನಪಕ್ಷಪಾತ ಮಾಡಿ ಶಂಕರ್ ಬಿದರಿಗೆ ನೀಡಲಾಗಿದೆ ಎಂದು ಆರೋಪಿಸಲಾಗಿತ್ತು. ನಂತರ ನಡೆದ ಕಾನೂನಿನ ಹೋರಾಟದಲ್ಲಿ ಶಂಕರ್ ಬಿದರಿ ಅವರಿಗೆ ಸೋಲಾಗಿತ್ತು.
ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿದರಿ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ತಮ್ಮ ವಿರುದ್ಧ ಯಾವುದೇ ಗುರುತರ ಆರೋಪಗಳು ಇಲ್ಲವೆಂದು ಸದಾಶಿವ ಆಯೋಗದ ವರದಿ ತಿಳಿಸಿದ್ದರೂ ತಮ್ಮ ಮೇಲೆ ಕ್ರಮ ಜರುಗಿಸಲಾಗಿತ್ತು, ನೋಟೀಸ್ ಕೂಡ ನೀಡದೆ ತಮ್ಮ ಹುದ್ದೆಯನ್ನು ಕಿತ್ತಹಾಕಲಾಗಿತ್ತು ಎಂದು ಅವರು ಆರೋಪಿಸಿದ್ದರು.
ಈಗ ಸಿಕ್ಕಿರುವ ಜಯದಿಂದ ತಮಗೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ. ಇದು ನಿರ್ಭೀತಿಯಿಂದ, ನಿಷ್ಪಕ್ಷಪಾತದಿಂದ ಭಯೋತ್ಪಾದಕರ, ದುಷ್ಟಶಕ್ತಿಗಳ ವಿರುದ್ಧ ಹೋರಾಡುತ್ತಿರುವ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಸಿಕ್ಕ ಜಯ ಎಂದು ಅವರು ಬಣ್ಣಿಸಿದ್ದಾರೆ. ನನಗೆ ಈಗ ಕೂಡ ಯಾರ ಮೇಲೂ ದ್ವೇಷವಿಲ್ಲ ಎಂದು ಅವರು ತಿಳಿಸಿದರು.












Click it and Unblock the Notifications