ಮೌಢ್ಯಕ್ಕೆ ಮಣೆ: ನಗರಕ್ಕೆ ಕಾಲಿಡದ ಸಚಿವ ರಾಮದಾಸ್‌

cm-shettar-visit-chamarajanagar-but-not-minister-ramdas
ಚಾಮರಾಜನಗರ, ಜ.10: ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೇನೋ ಚಾಮರಾಜನಗರಕ್ಕೆ ಅಂಟಿರುವ ಕಳಂಕ ನಿವಾರಿಸುವ ಹಾದಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿ, ಜನರಿಂದ ಸೈ ಎನಿಸಿಕೊಂಡರು. ಆದರೆ ಅವರದೇ ಸಂಪುಟದಲ್ಲಿರುವ ಸಚಿವರೊಬ್ಬರು ಆ ಕಡೆ ತಲೆಯಿಟ್ಟೂ ಮಲಗಿಲ್ಲ.

ಗಮನಾರ್ಹವೆಂದರೆ, ಚಾಮರಾಜನಗರಕ್ಕೆ ಭೇಟಿ ನೀಡುವ ವಿಷಯದಲ್ಲಿ ಪಕ್ಕದ ಜಿಲ್ಲೆಯರೇ ಆದ ಸಚಿವ ರಾಮದಾಸ್‌ ಹಿಂದಿನಿಂದಲೂ ಈ ಮೌಢ್ಯವನ್ನು ಪರಿಪಾಲಿಸಿಕೊಂಡು ಬಂದಿದ್ದಾರೆ.

ಖುದ್ದು ಮುಖ್ಯಮಂತ್ರಿಯೇ ಚಾಮರಾಜನಗರದವರೆಗೂ ಪಾದ ಬೆಳೆಸಿರುವಾಗ ಅವರ ಜತೆ ಗಡಿ ಭಾಗದವರೆಗೂ ಬಂದ ರಾಮದಾಸರು, ಆನಂತರ ಇದ್ದಕ್ಕಿದ್ದಂತೆ 'ನನಗೆ ಮೈಸೂರಿನಿಂದ ಕಾಲ್ ಬಂದಿದೆ' ಎಂದು ಕಾಲ್ಕಿತ್ತರು.

ಕುತೂಹಲದ ಸಂಗತಿಯೆಂದರೆ ಸಚಿವರಾಗುವ ಮೊದಲು ಇದೇ ರಾಮದಾಸ್‌, ನಗರದಲ್ಲಿ ವಿಶ್ವ ಹಿಂದೂ ಪರಿಷತ್‌ ಶಾಲೆಯ ಖಾಸಗಿ ಕಾರ್ಯಕ್ರಮಗಳಲ್ಲಿ ಆಗಾಗ ಪಾಲ್ಗೊಳ್ಳುತ್ತಿದ್ದರು. ಸಚಿವರಾಗುತ್ತಿದ್ದಂತೆ ಸರಕಾರಿ ಕಾರ್ಯಕ್ರಮಕ್ಕೂ ಬಾರದಿರುವುದು ಮೌಢ್ಯದ ಪರಮಾವಧಿಯೇ ಸರಿ.

ಜೆಎಸ್‌ಎಸ್‌ ಶಿಕ್ಷಣ ಸಂಸ್ಥೆಯ ನರ್ಸಿಂಗ್‌ ಶಾಲಾ ಕಟ್ಟಡವನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ರಾಮದಾಸ್‌ ಉದ್ಘಾಟಿಸಬೇಕಿತ್ತು. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಸಹ ಇತ್ತು. ಹಾಗೆ ನೋಡಿದರೆ ನಗರದಲ್ಲಿ ಜಿಲ್ಲಾಡಳಿತದ ಕಾರ್ಯಕ್ರಮದಲ್ಲೂ ಅವರ ಹೆಸರಿತ್ತು (ಮೇಲಿನ ಚಿತ್ರ ನೋಡಿ).
ಆದರೆ ರಾಮದಾಸ್‌ ನಿನ್ನೆ ಬೆಳಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಲೆಮಹದೇಶ್ವರ ಬೆಟ್ಟದವರೆಗೂ ಬಂದರಾದರೂ ಆನಂತರ ನಾಪತ್ತೆಯಾದರು.

ಚಾಮರಾಜನಗರ ಭೇಟಿ ವಿಷಯದಲ್ಲಿ (ಅಂದರೆ ಭೇಟಿಯ ನಂತರ ಅಧಿಕಾರ ಹೋಗುತ್ತದೆಂಬ) ಮೂಢನಂಬಿಕೆಯಿರುವುದು ಮುಖ್ಯಮಂತ್ರಿಗಳ ಬಗ್ಗೆ ಮಾತ್ರ. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅನೇಕ ಮಂತ್ರಿಗಳಿಗೂ ಈ ಮೌಢ್ಯ ಅಂಟಿಕೊಂಡಿದೆ. ಶೋಭಾ ಕರಂದ್ಲಾಜೆ, ಸಿಎಚ್ ವಿಜಯಶಂಕರ್‌ ಸೇರಿದಂತೆ ಕೆಲ ಸಚಿವರು ಇತ್ತ ತಲೆಹಾಕಿಲ್ಲ.

ಆದರೆ ದಿಟ್ಟ ಸಿಎಂ ಮಾತ್ರ, 'ಚಾಮರಾಜನಗರಕ್ಕೆ ಈ ಹಿಂದೆಯೂ ಕಂದಾಯ, ಗ್ರಾಮೀಣಾಭಿವೃದ್ಧಿ ಮಂತ್ರಿಯಾಗಿ ಬಂದಿದ್ದೆ. ಅದಾಗುತ್ತಿದ್ದಂತೆ ಮುಖ್ಯಮಂತ್ರಿಯಾಗಿ ಪ್ರಮೋಷನ್‌ ಸಿಕ್ಕಿತು' ಎಂದು ಶೆಟ್ಟರ್ ಸಂತಸ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, 'ನನ್ನ ಅಧಿಕಾರಾವಧಿ ಪೂರೈಸುತ್ತೇನೆ ಎಂಬ ವಿಶ್ವಾಸವಿದೆ. ಬಜೆಟ್ ಮಂಡಿಸಿದ ನಂತರ ಮತ್ತೆ ಫೆಬ್ರವರಿ ತಿಂಗಳಲ್ಲಿ ಚಾಮರಾಜನಗರಕ್ಕೆ ಬರುತ್ತೇನೆ' ಎಂದು ವಾಗ್ದಾನವನ್ನೂ ನೀಡಿದರು.

ಮುಗ್ಧ ಮನಸ್ಸಿನ ಶೆಟ್ಟರ್ ಇನ್ನೂ ಏನಂತಾರೆ ಕೇಳಿಸಿಕೊಳ್ಳಿ: 'ನಾನು ಮೂಢನಂಬಿಕೆ, ಕಂದಾಚಾರಗಳನ್ನು ನಂಬುವುದಿಲ್ಲ. ಕಾವೇರಿ ಗೃಹಕ್ಕೆ ಹೋಗಬೇಡಿ. ಅಲ್ಲಿಗೆ ಹೋದರೆ ಅಧಿಕಾರ ಹೋಗುತ್ತದೆ ಎಂದರು. ನಾನು ಸ್ಪೀಕರ್‌ ಆಗಿದ್ದಾಗ ಅಲ್ಲಿಗೆ ಹೋಗಿದ್ದು, ಮುಖ್ಯಮಂತ್ರಿಯಾದ ಮೇಲೂ ಅಲ್ಲಿಯೇ ಇದ್ದೇನೆ. ಆ ಮನೆಗೆ ಯಾವುದೇ ವಾಸ್ತು ಬದಲಾವಣೆ ಮಾಡಲಿಲ್ಲ. ಬಾಗಿಲು ಬದಲಿಸಲಿಲ್ಲ' ಅಲ್ಲಿದ್ದ ವಾಸ್ತು ಪರಿಣತರತ್ತ ತಿರುಗಿ ನೋಡುತ್ತಾ ಶೆಟ್ಟರ್‌ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+