ಬಿಜೆಪಿ ಮಾಸ್ಟರ್ ಸ್ಟ್ರೋಕ್, ಕರಂದ್ಲಾಜೆಗೆ ಕೊಕ್?

ಶನಿವಾರ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಸಚಿವರು, ಸಂಸದರು ಮತ್ತು ವಿಧಾನಪರಿಷತ್ ಸದಸ್ಯರ ಸಭೆಯಲ್ಲಿ, ಯಡಿಯೂರಪ್ಪನವರನ್ನು ಬಹಿರಂಗವಾಗಿ ಬೆಂಬಲಿಸುತ್ತಿರುವ ಮತ್ತು ಬಿಜೆಪಿಯನ್ನು ಖುಲ್ಲಂಖುಲ್ಲಾ ಟೀಕಿಸುತ್ತಿರುವ ಶೋಭಾ ಕರಂದ್ಲಾಜೆ ಅವರನ್ನು ಕೈಬಿಡಬೇಕು ಎಂಬ ಒಕ್ಕೊರಲ ಕೂಗು ಕೇಳಿಬಂದಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಇದಕ್ಕೆ ಹೈಕಮಾಂಡ್ ಹಸಿರು ನಿಶಾನೆ ಕೂಡ ದೊರೆತಿದೆ ಎಂದು ತಿಳಿದುಬಂದಿದೆ.
ಅಂದುಕೊಂಡಂತೆ ನಡೆದುಕೊಂಡರೆ, ಬಿಜೆಪಿ ಸರಕಾರದ ಏಕೈಕ ಮಹಿಳಾ ಸಚಿವೆ ಶೋಭಾ ಕರಂದ್ಲಾಜೆ ಕರೆಂಟ್ ಹೊಡೆಸಿಕೊಳ್ಳುವುದು ಖಚಿತ. ಈ ಮಾಸ್ಟರ್ ಸ್ಟ್ರೋಕ್ ಯಡಿಯೂರಪ್ಪನವರಿಗೆ ಶಾಕ್ ನೀಡುವ ತಂತ್ರವೂ ಆಗಿದೆ. ಈ ಅವಮಾನವನ್ನು ತಪ್ಪಿಸಿಕೊಳ್ಳಲು ಅವರಾಗಿಯೇ ಪಕ್ಷ ತೊರೆದು ಹೋಗುತ್ತಾರಾ ಎಂಬುದು ಕೆಲ ದಿನಗಳಲ್ಲಿ ತಿಳಿದುಬರಲಿದೆ. ಈ ಎಲ್ಲ ಬೆಳವಣಿಗೆಗಳು ಸಂಕ್ರಾಂತಿಗೆ ಮೊದಲೇ ನಡೆಯುತ್ತಿರುವುದು ಗಮನಾರ್ಹ.
ಶೋಭಾ ಕರಂದ್ಲಾಜೆ ಅವರನ್ನು ಮಾತ್ರವಲ್ಲ ಯಡಿಯೂರಪ್ಪ ಅವರನ್ನು ಬಹಿರಂಗವಾಗಿಯೇ ಬೆಂಬಲಿಸುತ್ತಿರುವ ಮತ್ತು ಹಾವೇರಿ ಸಮಾವೇಶಕ್ಕೆ ತೆರಳಿದ್ದ ಎಲ್ಲ 14 ಶಾಸಕರನ್ನು ಪಕ್ಷದಿಂದ ಕೈಬಿಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ. ಈ ಕುರಿತು ಯಾವುದೇ ಅಂತಿಮ ನಿರ್ಣಯ ತೆಗೆದುಕೊಂಡಿಲ್ಲ. ಆದರೆ, ಶೋಭಾ ಕೈಬಿಡುವ ಕುರಿತು ಒಂದು ವಾರದಲ್ಲಿ ಅಂತಿಮ ನಿರ್ಣಯ ಹೊರಬೀಳುವ ಎಲ್ಲ ಸಾಧ್ಯತೆಯಿದೆ.
ಇದೇ ಸಮಯದಲ್ಲಿ, ಯಡಿಯೂರಪ್ಪನವರಿಗೆ ಬಿಸಿ ಮುಟ್ಟಿಸುವ ಎರಡನೇ ತಂತ್ರವಾಗಿ, ಇನ್ನೊಂದು ವಾರದಲ್ಲಿ ಸಂಪುಟ ಪುನಾರಚಿಸುವ ಮತ್ತು ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಸಂಪುಟ ಪುನಾರಚಿಸುವ ಮುಖಾಂತರ ಯಡಿಯೂರಪ್ಪ ಬೆಂಬಲಿಗರನ್ನು ಮೂಲೆಗೆ ತಳ್ಳಿ, ಅವರು ತಾವಾಗಿಯೇ ಪಕ್ಷದಿಂದ ಹೊರಹೋಗುವಂತೆ ತಂತ್ರ ಹೆಣೆಯಲಾಗಿದೆ.
ಯಡಿಯೂರಪ್ಪ ಸರಕಾರದ ಪತನಕ್ಕೆ ಡೆಡ್‌ಲೈನ್ ನೀಡಲಿ ಬಿಡಲಿ, ಅದನ್ನು ಲೆಕ್ಕಿಸದೆ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ನಿರ್ಧರಿಸಲಾಗಿದ್ದು, ಜ.20ರಿಂದ ಪ್ರಚಾರ ಕಾರ್ಯ ಆರಂಭಿಸಲು ನಿಶ್ಚಯಿಸಲಾಗಿದೆ. ಬೆಂಗಳೂರಿನಲ್ಲಿ ಮಾರ್ಚ್ 3ರಂದು ಬೃಹತ್ ಬಹಿರಂಗ ಸಭೆ ನಡೆಸಲು ನಿರ್ಧರಿಸಲಾಗಿದ್ದು, ದೆಹಲಿಯ ಹಿರಿಯ ನಾಯಕರನೇಕರು ಈ ಪ್ರಚಾರ ಕಾರ್ಯದಲ್ಲಿ ಮತ್ತು ಬೆಂಗಳೂರು ಸಭೆಯಲ್ಲಿ ಭಾಗವಹಿಸಲಿದ್ದಾರೆ.












Click it and Unblock the Notifications