ಮಂಗಳೂರು ದಾಳಿ: ಮತ್ತೊಬ್ಬ ಪತ್ರಕರ್ತನ ಬಂಧನ

ಮಾಧ್ಯಮ ಪ್ರತಿನಿಧಿ ಸಹಿತ ಇಬ್ಬರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ನಗರದ ಸಹಾಯ ಟಿವಿ ಎಂಬ ಸ್ಥಳೀಯ ಸುದ್ದಿ ವಾಹಿನಿಯ ಕ್ಯಾಮರಾಮನ್ ಶರಣ್ ಮತ್ತು 35ನೇ ಆರೋಪಿಯಾಗಿ ಗುರುತಿಸಲಾಗಿರುವ ಶಕ್ತಿನಗರ ನಿವಾಸಿ ಸಂತೋಷ ಶೆಟ್ಟಿ ಬಂಧಿತ ಆರೋಪಿಗಳಾಗಿದ್ದಾರೆ.
ಶರಣ್‌ರನ್ನು ಪಾಂಡೇಶ್ವರದಲ್ಲಿ ಮತ್ತು ಸಂತೋಷ ಶೆಟ್ಟಿಯನ್ನು ಬಲ್ಮಠ ಜ್ಯೋತಿ ಟಾಕೀಸ್ ಬಳಿಯಿಂದ ಬಂಧಿಸಲಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಪಡೀಲ್ ಶಾಂತಿನಗರ ಬಟ್ಲ ಗುಡ್ಡೆಯಲ್ಲಿರುವ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಎಂಬ ಹೆಸರಿನ ಬಂಗ್ಲೆಯಲ್ಲಿ ಜುಲೈ 28ರಂದು ಸಂಜೆ ನಡೆಯುತ್ತಿದ್ದ ಬರ್ತ್ ಡೇ ಪಾರ್ಟಿಯನ್ನು ರೇವ್ ಪಾರ್ಟಿ ಎಂದು ಆರೋಪಿಸಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರೆನ್ನಲಾದ 50ಕ್ಕೂ ಹೆಚ್ಚು ಮಂದಿಯ ತಂಡ ದಾಳಿ ನಡೆಸಿತ್ತು.
ಈ ದಾಳಿಯ ವರದಿ ಮಾಡಲು ಹೋಗಿದ್ದ ಪತ್ರಕರ್ತರನ್ನೇ ಆರೋಪಿಗಳಾಗಿ ಗುರುತಿಸಿದ ಪೊಲೀಸರು ಸಹಾಯ ಟಿವಿ ಸುದ್ದಿವಾಹಿನಿಯ ಕ್ಯಾಮರಾಮನ್ ಶರಣ್ ಮತ್ತು ವರದಿಗಾರ ನವೀನ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ನ.7ರಂದು ರಾತ್ರಿ ಕಾರ್ಯಕ್ರಮವೊಂದನ್ನು ಮುಗಿಸಿ ಬರುತ್ತಿದ್ದ ನವೀನನ್ನು ಪೊಲೀಸರು ಬಂಧಿಸಿದ್ದರು. ನವೀನ್‌ಗೆ ಜಾಮೀನು ದೊರಕಿಸಲು ನಡೆಸಿದ ಕಾನೂನು ಹೋರಾಟ ಇನ್ನೂ ಫಲ ಪಡೆದಿಲ್ಲ. ಈಗ ಶರಣ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಪಡೀಲ್ ಹೋಂ ಸ್ಟೇ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನವೀನ್ ಮತ್ತು ಶರಣ್ ಸಹಿತ 44 ಆರೋಪಿಗಳನ್ನು ಗುರುತಿಸಲಾಗಿದೆ. ಈಗಾಗಲೇ 27 ಮಂದಿಯನ್ನು ಬಂಧಿಸಲಾಗಿದೆ. ಶರಣ್ ಮತ್ತು ಸಂತೋಷ ಸೇರಿ ಈಗ ಬಂಧಿತರ ಸಂಖ್ಯೆ 29ಕ್ಕೆ ಏರಿಕೆಯಾಗಿದೆ.
ಹೋಂ ಸ್ಟೇ ದಾಳಿ ಪ್ರಕರಣದಲ್ಲಿ ಇಬ್ಬರು ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ 6 ಮಂದಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಆರೋಪ ಪೊಲೀಸರ ವಿರುದ್ಧ ಕೇಳಿ ಬಂದಿದೆ. ಹೋಂ ಸ್ಟೇಯ ಮೇಲೆ ದಾಳಿಯಾದಾಗ ಕುತೂಹಲದಿಂದ ನೋಡಲು ಹೋಗಿದ್ದ ಅಕ್ಕಪಕ್ಕದ ಮನೆಯ ನಾಲ್ವರು ಕೂಡಾ ಬಂಧಿತರಾಗಿದ್ದಾರೆ.
ಈ ನಡುವೆ ಶರಣ್ ಹಾಗೂ ಸಂತೋಷ್ ಅವರನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರ ಸಮ್ಮುಖದಲ್ಲಿ ಹಾಜರುಪಡಿಸಲಾಗಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.












Click it and Unblock the Notifications