ಬಿಜೆಪಿಗೂ ಇಲ್ಲ, ಕಾಂಗ್ರೆಸ್ಗೂ ಇಲ್ಲ, ಜೆಡಿಎಸ್ಸಿಗೇ ಎಲ್ಲಾ

ಭ್ರಷ್ಟಾಚಾರ ರಾಷ್ಟ್ರವನ್ನೇ ಹಾಳುಮಾಡುತ್ತಿದೆ. ಅಧಿಕಾರ ದುರುಪಯೋಗ ದೇಶವನ್ನು ಕಿತ್ತು ತಿನ್ನುತ್ತಿದೆ. ಆದರೆ ಇವುಗಳನ್ನು ತಡೆಗಟ್ಟುವಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಸಂಪೂರ್ಣ ವಿಫಲಗೊಂಡಿವೆ. ಜನಕ್ಕೆ ಇದು ಅರ್ಥವಾಗಿದೆ. ಹಾಗಾಗಿ ಆ ಪಕ್ಷಗಳಿಗೇ ಮತ್ತೆ ಅಧಿಕಾರ ನೀಡುವುದು ದುಸ್ತರ ಎಂದು ಜೆಡಿಎಸ್ ಅಧಿನಾಯಕ ದೇವೇಗೌಡ ವಿಶ್ಲೇಷಿಸಿದ್ದಾರೆ.
ಸಿಎಂ ಶೆಟ್ಟರ್ ಬಹುಮತ ಕಳೆದುಕೊಂಡಿದ್ದಾರೆ. ಅವರು ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಒಂದು ವೇಳೆ, ಇದೇ ವೇಳೆ, ಕಾಂಗ್ರೆಸ್ ಪಕ್ಷವು ಅವಿಶ್ವಾಸ ನಿರ್ಣಯ ಮಂಡಿಸಿದರೆ ಜೆಡಿಎಸ್ ಅದನ್ನು ಅನುಮೋದಿಸುತ್ತದೆ ಎಂದು ಗೌಡರು ಹೇಳಿದರು.
ರಾಜೀವ್ ಚಂದ್ರಶೇಖರ ಅವರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಲು ದೇವೇಗೌಡರು ಹಣ ಪಡೆದಿದ್ದಾರೆ ಎನ್ನುವ ಅಶೋಕ್ ಖೇಣಿ ಆರೋಪಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ ಅವರು ಖೇಣಿಗೆ ಈ ಆರೋಪ ಮಾಡಲು ಮಾನ ಮರ್ಯಾದೆ ಇರಬೇಕು.
ವಿದೇಶಿ ಕಂಪನಿಗಳ ಹೆಸರಿನಲ್ಲಿ ಒಂದು ರೂಪಾಯಿ ಬಂಡವಾಳ ಹೂಡದೆ ಅಧಿಕಾರಿ ವರ್ಗವನ್ನು ಬುಟ್ಟಿಗೆ ಹಾಕಿಕೊಂಡು, ರೈತರ ಜಮೀನಿನಲ್ಲಿ ವ್ಯವಹಾರ ನಡೆಸಿ, ರೈತರನ್ನು ವಂಚಿಸಿದ ಖೇಣಿ ವಿರುದ್ಧ ನಾನು ಈಗ ನಿರ್ಣಾಯಕ ಹೋರಾಟಕ್ಕೆ ಇಳಿದಿದ್ದೇನೆ ಎಂದು ಹೇಳಿದರು.
ಕುಟುಂಬ ರಾಜಕೀಯ ಸಮರ್ಥಿಸಿಕೊಂಡ ಗೌಡರು: ಇದೇ ವೇಳೆ ಗೌಡರು ಕುಟುಂಬ ರಾಜಕೀಯವನ್ನು ಸಮರ್ಥಿಸಿಕೊಂಡಿದ್ದಾರೆ. ಕುಟುಂಬ ರಾಜಕೀಯ ಆರೋಪ ಈಗ ದೇಶದಲ್ಲಿ ಯಾವುದೇ ಮಹತ್ವ ಹೊಂದಿಲ್ಲ. ಎಲ್ಲ ರಾಜ್ಯಗಳಲ್ಲಿ ಕುಟುಂಬ ರಾಜಕೀಯ ಪ್ರಧಾನವಾಗಿ ನಡೆದಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ ಎಂದು ವಿಶ್ಲೇಷಿಸಿದ್ದಾರೆ.
ಕರ್ನಾಟಕ ಜನತಾ ಪಕ್ಷದ ಬಗ್ಗೆ ನನಗೆ ಯಾವುದೇ ಭಯವಿಲ್ಲ. ಪ್ರಾದೇಶಿಕ ಪಕ್ಷವಾಗಿ ಜಾ ದಳ ಈ ಎಲ್ಲ ಅಗ್ನಿಪರೀಕ್ಷೆಗಳಿಂದ ಪಾರಾಗಿ ಬಂದಿದೆ. ಈಗ ಹೊಸದಾಗಿ ಪ್ರಾದೇಶಿಕ ಪಕ್ಷ ಆರಂಭಿಸಿದವರು ಆ ಅಗ್ನಿ ಪರೀಕ್ಷೆಗಳಿಗೆ ಗುರಿಯಾಗಬೇಕಾಗಿದೆ.












Click it and Unblock the Notifications