ಗಡದ್ ನಿದ್ದೆಯಲ್ಲಿ ಬಿಬಿಎಂಪಿ:ಆಂಧ್ರದ ಕಸ ಬೆಂಗ್ಳೂರಲ್ಲಿ ಡಂಪ್

ಮಂಡೂರು ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ವಹಣೆ ಗುತ್ತಿಗೆ ಪಡೆದಿರುವ ಹೈದರಾಬಾದ್ ಮೂಲದ 'ಶ್ರೀನಿವಾಸ ಗಾಯಿತ್ರಿ' ಸಂಸ್ಥೆಗೆ ವಿಚಾರ ತಿಳಿದಿದ್ದರೂ ಬಿಬಿಎಂಪಿಗೆ ಈ ವಿಚಾರ ತಿಳಿಯದೇ ಇರುವುದು ಸೋಜಿಗದ ಸಂಗತಿ. ಮಾಧ್ಯಮಗಳಲ್ಲಿ ವರದಿಯಾದ ನಂತರ ಎಚ್ಚೆತ್ತುಕೊಂಡ ಬಿಬಿಎಂಪಿ ಘಟನೆಯ ತನಿಖೆಗೆ ಆದೇಶಿಸಿದೆ.
ಅವಧಿ ಮುಗಿದ ಕೋಲ್ಡ್ ಡ್ರಿಂಕ್ಸ್ ಹೆಸರಿನಲ್ಲಿ ವಾರಕ್ಕೆ ಎರಡರಿಂದ ಮೂರು ಬಾರಿ ಈ ರಾಸಾಯನಿಕ ತಾಜ್ಯಗಳನ್ನು ಮಂಡೂರಿನಲ್ಲಿ ತಂದು ಸುರಿಯಲಾಗುತ್ತಿದೆ. ಸೋಮವಾರ (ಡಿ 24) ರಾತ್ರಿ ಇದೇ ರೀತಿ ಬಂದಾಗ ಟ್ಯಾಂಕರ್ ಸಮೇತ ಚಾಲಕ ಮತ್ತು ಕ್ಲೀನರ್ ಅನ್ನು ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಸಕ್ಕಿಂತ ದುರ್ನಾತ ಬೀರುತ್ತಿರುವ ಈ ರಾಸಾಯನಿಕ ತ್ಯಾಜ್ಯಗಳನ್ನು ಇಲ್ಲಿ ತಂದು ಸುರಿಯಲಾಗುತ್ತಿದೆ. ಸರಕಾರ ಮತ್ತು ಬಿಬಿಎಂಪಿ 'ಗಡದ್ ನಿದ್ದೆ' ಯಲ್ಲಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಮಂಡೂರಿನ ಕಸ ಸಂಸ್ಕರಣೆಯ ಗುತ್ತಿಗೆಯನ್ನು ಹೈದರಾಬಾದ್ ಕಂಪನಿಗೆ ನೀಡಲಾಗಿದೆ. ಕಸಕ್ಕೆ ಸಿಂಪಡಿಸಲು ಬೇಕಾಗುವ ರಾಸಾಯನಿಕ ಪದಾರ್ಥಗಳನ್ನು ತಂದಿರಬಹುದು ಎಂದು ನಾವು ತಿಳಿದುಕೊಂಡಿದ್ದೆವು ಎಂದು ಬಿಬಿಎಂಪಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದಾರೆ.
ಆಂಧ್ರದಿಂದ ಬರುತ್ತಿರುವ ಈ ತ್ಯಾಜ್ಯಗಳನ್ನು ಪರೀಕ್ಷೆ ಮಾಡಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಸಿದ್ದಯ್ಯ ಹೇಳಿದ್ದಾರೆ.
ಅಲ್ಲಿಯ ತ್ಯಾಜ್ಯಗಳನ್ನು ಇಲ್ಲಿ ಯಾಕೆ ತಂದು ಸುರಿಯಲಾಗುತ್ತಿದೆ ಎಂದು ಗೊತ್ತಿಲ್ಲ. ಎಷ್ಟು ದಿನದಿಂದ ಇಂದು ನಡೆಯುತ್ತಿದೆ, ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ತನಿಖೆ ಮಾಡುತ್ತೇವೆ ಎಂದು ಮೇಯರ್ ವೆಂಕಟೇಶ್ ಮೂರ್ತಿ ಹೇಳಿದ್ದಾರೆ.












Click it and Unblock the Notifications