ಜೆಡಿಎಸ್ ಮೀನುಗಾರಿಕಾ ಘಟಕದ ಅಧ್ಯಕ್ಷ ಗಿರೀಶ್ ಕೊಲೆ

ಹೊಯ್ಗೆಬಝಾರ್ ನಿವಾಸಿ 50 ವರ್ಷ ವಯಸ್ಸಿನ ಗಿರೀಶ್ ಅವರ ಕೊಲೆ ಪೆರ್ಮುದೆ- ಬೆಳ್ಳುಳ್ಳಿಮಾರ್ ಮುರ್ಕೋಡಿ ಎಂಬಲ್ಲಿ ನಡೆದಿದೆ.
ಮುರ್ಕೋಡಿಯ ಪೊದೆಗಳೆಡೆಯಲ್ಲಿ ಗಿರೀಶ್ ಪುತ್ರನ್ ಮೃತದೇಹ ಇರಿದು ಕೊಲೆಗೈದಿರುವ ಸ್ಥಿತಿಯಲ್ಲಿ ಭಾನುವಾರ ಸಂಜೆ ಪತ್ತೆಯಾಗಿತ್ತು. ಟ್ಯಾಂಕರ್ ಚಾಲಕನೊಬ್ಬ ಗಿರೀಶ್‌ರ ಮೃತದೇಹವನ್ನು ಗಮನಿಸಿ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಇನ್ಸ್‌ಪೆಕ್ಟರ್ ದಿನಕರ್ ಶೆಟ್ಟಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು.
ಡಿ.21ರಂದು ಸಂಜೆ 5:30ಕ್ಕೆ ಮನೆಗೆ ಆಗಮಿಸಿದ್ದ ಮೂವರೊಂದಿಗೆ ಗಿರೀಶ್ ಹೊರಗಡೆ ತೆರಳಿದ್ದವರು ಬಳಿಕ ನಾಪತ್ತೆಯಾಗಿದ್ದರು. ಅವರ ಮೊಬೈಲ್ ಫೋನ್ ಕೂಡಾ ಸ್ವಿಚ್ಡ್ ಆಫ್ ಆಗಿತ್ತು. ಈ ಬಗ್ಗೆ ಗಿರೀಶ್ ಪತ್ನಿ ಪ್ರಫುಲ್ಲಾ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪೊಲೀಸ್ ತನಿಖೆಯ ಆಧಾರದಲ್ಲಿ ಅವರ ಮೊಬೈಲ್ ನೆಟ್‌ವರ್ಕ್ ಏಳು ಗಂಟೆಯವರೆಗೆ ಎನ್‌ಐಟಿಕೆ ಪರಿಸರದಲ್ಲಿ ಕಾರ್ಯಾಚರಿಸಿದ್ದು ಪತ್ತೆಯಾಗಿತ್ತು. ಆ ಬಳಿಕ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಆಗಿತ್ತು. ಹೀಗಾಗಿ ಗಿರೀಶ್‌ರನ್ನು ಮನೆ ಯಿಂದ ಕರೆದೊಯ್ದಿದ್ದ ತಂಡವೇ ಅವರನ್ನು ಕೊಲೆಗೈದು ಬಳಿಕ ಮೃತದೇಹವನ್ನು ಎಸೆದು ಪರಾರಿಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಆದರೆ ಘಟನಾ ಸ್ಥಳದಲ್ಲಿ ಕೊಲೆ ನಡೆಸಿರುವ ಕುರುಹು ಇಲ್ಲದಿರುವುದರಿಂದ ಬೇರೆ ಕಡೆ ಕೊಲೆಗೈದು ಮುರ್ಕೋಡಿಯಲ್ಲಿ ತಂದು ಎಸೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಗಿರೀಶ್ ಮೃತದೇಹದ ಹೊಟ್ಟೆ, ಕಾಲು, ಎದೆ, ಮುಖದ ಭಾಗಕ್ಕೆ 59 ಬಾರಿ ಹರಿತವಾದ ಆಯುಧದಿಂದ ಇರಿಯಲಾಗಿದೆ. ಎಡಗೈಯನ್ನು ಮುರಿದು ಹಾಕಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಿಯಲ್ ಎಸ್ಟೇಟ್ ದಂಧೆ ಕಾರಣ: ಜೆಡಿಎಸ್ ಸಕ್ರಿಯ ಕಾರ್ಯಕರ್ತರಾಗಿದ್ದ ಗಿರೀಶ್ ಭೂ ವ್ಯವಹಾರ, ರಿಯಲ್ ಎಸ್ಟೇಟ್ ಏಜೆಂಟ್ ಗಳ ಸಂಪರ್ಕ ಹೊಂದಿದ್ದರು. ಇದು ಕೆಲವರಿಗೆ ಇಷ್ಟವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವೈಯಕ್ತಿಕ ದ್ವೇಷ ಕಾರಣಕ್ಕೆ ಗಿರೀಶ್‌ರನ್ನು ಅಪಹರಿಸಿ ಕೊಲೆಗೈದಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.
ಗಿರೀಶ್ ಹೊಯ್ಗೆಬಝಾರ್ ಬಳಿ ಎರಡು ಕಟ್ಟಡಗಳ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು. ಜ.18ರಂದು ಗೃಹಪ್ರವೇಶ ಇಟ್ಟುಕೊಂಡಿದ್ದರು. ಡಿ.21ರ ಸಂಜೆ ಮನೆ ಯಿಂದ ಹೊರಹೋಗುವ ವೇಳೆ ಸುಮಾರು ಐದು ಲಕ್ಷ ರೂ. ವೌಲ್ಯದ ಚಿನ್ನದ ಸರ, ಐದು ಚಿನ್ನದ ಉಂಗುರಗಳನ್ನು ಅವರು ಧರಿಸಿದ್ದು, ಹಂತಕರು ಅವುಗಳನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ಕುರಿತು ಬಜ್ಪೆಹಾಗೂ ಪಾಂಡೇಶ್ವರ ಠಾಣಾ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. (ಪಿಟಿಐ)












Click it and Unblock the Notifications