ಅತ್ಯಾಚಾರದ ವಿರುದ್ಧ ಹೋರಾಟ : ಭಾನುವಾರದ ಬೆಳವಣಿಗೆ
ನವದೆಹಲಿ, ಡಿ. 23 : ದೆಹಲಿಯಲ್ಲಿ ಕಳೆದ ಭಾನುವಾರ ರಾತ್ರಿ ಯುವತಿಯ ಮೇಲೆ ನಡೆದ ಅಮಾನುಷ ಸಾಮೂಹಿಕ ಅತ್ಯಾಚಾರ ದೇಶದ ಇಡೀ ಯುವ ಸಮೂಹವನ್ನೇ ಕೆರಳಿಸಿದೆ. ಇನ್ನು ಸಡಿಲ ಬಿಟ್ಟರೆ, ಕೈಕಟ್ಟಿ ಕುಳಿತರೆ ಕೆಲಸ ಆಗುವುದಿಲ್ಲವೆಂದು, ಆರೋಪಿಗಳಿಗೆ ಅತ್ಯುಗ್ರ ಶಿಕ್ಷೆ ಆಗಲೇಬೇಕೆಂದು ಹಗಲು ರಾತ್ರಿ ಉಗ್ರ ಹೋರಾಟ ಮಾಡುತ್ತಿದ್ದಾರೆ.
"ನಮಗೆ ನ್ಯಾಯ ಬೇಕೇ ಬೇಕು, ನಮಗೆ ನ್ಯಾಯ ಬೇಕೇ ಬೇಕು" ಎಂದು ಘೋಷಣೆ ಕೂಗುತ್ತ ಪೊಲೀಸರ ವಿರುದ್ಧ, ರಾಜಕಾರಣಿಗಳ ವಿರುದ್ಧ ಯುವಕ ಯುವತಿಯರು ಸೆಡ್ಡುಹೊಡೆದು ನಿಂತಿದ್ದಾರೆ. ಅತ್ಯಾಚಾರಿಗಳಿಗೆ ಮರಣ ದಂಡನೆಯಂತಹ ಉಗ್ರ ಶಿಕ್ಷೆ ನೀಡುವಂತಹ ಕಾನೂನು ರೂಪಿಸುವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಇಡೀ ಅಧಿಕಾರಶಾಹಿಯನ್ನು ಧಿಕ್ಕರಿಸಿ ನಿಂತಿದ್ದಾರೆ.
ಇಂಡಿಯಾ ಗೇಟ್ ಬಳಿ, ವಿಜಯ್ ಚೌಕ್‌ನಲ್ಲಿ, ರಾಷ್ಟ್ರಪತಿ ಭವನದ ಎದಿರು, ಜಂತರ್ ಮಂತರ್‌ನಲ್ಲಿ ಯುವಸಮೂಹ ಪ್ರತಿಭಟನೆಯಲ್ಲಿ ನಿರತವಾಗಿದೆ. ಶನಿವಾರ ಪ್ರತಿಭಟನಾಕಾರರಿದ್ದಲ್ಲಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಭೇಟಿ ನೀಡಿ, ನಾನು ನಿಮ್ಮೊಂದಿಗಿದ್ದೇನೆ ಎಂಬ ಸಂದೇಶ ಸಾರಿದ್ದಾರೆ. ಆದರೆ, ಕ್ರಮ ತೆಗೆದುಕೊಳ್ಳಲು ಯಾವುದೇ ಡೆಡ್‌ಲೈನ್ ನೀಡಲು ನಿರಾಕರಿಸಿದ್ದಾರೆ.
ಈ ನಡುವೆ, ಅತ್ಯಾಚಾರಕ್ಕೆ ಒಳಗಾಗಿರುವ 23 ವರ್ಷದ ಯುವತಿಗೆ ಜ್ಞಾನ ಬಂದಿದ್ದರೂ ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟವನ್ನು ಮುಂದುವರಿಸಿದ್ದಾರೆ. ಅವರಿಗೆ ಅಳವಡಿಸಲಾಗಿದ್ದ ಕೃತಕ ಉಸಿರಾಟದ ಸಾಧನವನ್ನು ತೆಗೆಯಲಾಗಿತ್ತು. ಆದರೆ, ಇದೀಗ ಬಂದಿರುವ ವರ್ತಮಾನದ ಪ್ರಕಾರ ಅವರ ಸ್ಥಿತಿ ವಿಷಮಿಸಿದ್ದರಿಂದ ಕೃತಕ ಉಸಿರಾಟದ ಸಾಧನವನ್ನು ಮತ್ತೆ ಅಳವಡಿಸಲಾಗಿದೆ.
ಭಾನುವಾರ, ಡಿ.23ರಂದು ಆದ ಪ್ರಮುಖ ಬೆಳವಣಿಗೆಗಳು ಕೆಳಗಿನಂತಿವೆ.

ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಲಾಠಿ
ಹದ್ದುಬಸ್ತಿಗೆ ಬರದ ಪ್ರತಿಭಟನಾಕಾರರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಕೆಲ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ಮಾಡುತ್ತಿದ್ದಂತೆ ಲಾಠಿ ಚಾರ್ಜ್ ಕೂಡ ಮಾಡಲಾಗಿದೆ. ಇಂದು ಭಾನುವಾರವಾದ್ದರಿಂದ ಭಾರೀ ಸಂಖ್ಯೆಯಲ್ಲಿ ಇಂಡಿಯಾ ಗೇಟ್ ಬಳಿ ಜನ ಜಮಾಯಿಸಿ ಅತ್ಯಾಚಾರಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೋರಾಟಕ್ಕೆ ಹುಮ್ಮಸ್ಸು ತುಂಬಿದ ಅರವಿಂದ್
ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಮತ್ತು ಯೋಗ ಗುರು ಬಾಬಾ ರಾಮದೇವ್ ಅವರು ತಮ್ಮ ಬೆಂಬಲಿಗರೊಂದಿಗೆ ಆಗಮಿಸುತ್ತಿದ್ದಂತೆ ಪ್ರತಿಭಟನಾಕಾರರಲ್ಲಿ ಇನ್ನಿಲ್ಲದ ಹುಮ್ಮಸ್ಸು ತುಂಬಿತು. ಕೆಲವರು ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಕಲ್ಲು ತೂರಲು ಆರಂಭಿಸಿದರು. ಎರಡು ವಾಹನಗಳಿಗೂ ಬೆಂಕಿ ಹಚ್ಚಲಾಯಿತು. ಹೋರಾಟ ಹಿಂಸಾತ್ಮಕ ರೂಪ ತಾಳುತ್ತಿದ್ದಂತೆ ಪೊಲೀಸರು ಅಶ್ರುವಾಯು ಸಿಡಿಸಬೇಕಾಯಿತು.

ದೆಹಲಿಯಲ್ಲಿ ಮಹಿಳೆ ಅಸುರಕ್ಷಿತ, ಒಪ್ಪಿದ ಸೋನಿಯಾ
ದೆಹಲಿಯಲ್ಲಿ ಮಹಿಳೆಯರು ಅಸುರಕ್ಷಿತವಾಗಿದ್ದಾರೆ ಎಂಬ ಮಾತನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಕಡೆಗೂ ಒಪ್ಪಿದ್ದಾರೆ. ತಮ್ಮನ್ನು ಭೇಟಿ ಮಾಡಲು ಬಂದ ವಿದ್ಯಾರ್ಥಿಗಳ ನಿಯೋಗದ ಜೊತೆ ಮಾತನಾಡಿದ ಅವರು, ಕಾನೂನಿನ ಪ್ರಕಾರ ಶೀಘ್ರದಲ್ಲೇ ಕ್ರಮ ತೆಗೆದುಕೊಳ್ಳುವ ವಾಗ್ದಾನ ನೀಡಿದ್ದಾರೆ. ಸೋನಿಯಾ ಜೊತೆ ರಾಹುಲ್, ಆರ್‌ಪಿಎನ್ ಸಿಂಗ್, ರೇಣುಕಾ ಚೌಧರಿ ಮುಂತಾದವರಿದ್ದರು.

ಯುವತಿಯರ ಜೊತೆ ಪೊಲೀಸ್ ಅನುಚಿತ ವರ್ತನೆ?
ಇಂಡಿಯಾ ಗೇಟ್ ಬಳಿ ಪೊಲೀಸರನ್ನು ಧಿಕ್ಕರಿಸಿ ಹೋರಾಟ ನಡೆಸುತ್ತಿರುವ ಕೆಲ ಯುವತಿಯರ ಜೊತೆ ಪೊಲೀಸ್ ಸಿಬ್ಬಂದಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ. ಇದರಿಂದ ಪೊಲೀಸ್ ಮತ್ತು ಯುವಕರ ನಡುವೆ ಜಟಾಪಟಿಯೂ ನಡೆಯಿತು. ಇಂಡಿಯಾ ಗೇಟ್‌ನಿಂದ ಯುವಕಯುವತಿಯರನ್ನು ಸ್ಥಳಾಂತರಿಸಲು ಪೊಲೀಸರು ಸತತ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಪ್ರತಿಬಂಧಕಾಜ್ಞೆ ಜಾರಿ
ಅತ್ಯಾಚಾರಿಗಳ ವಿರುದ್ಧ ಹೋರಾಟ ನಡೆಸುತ್ತಿರುವ ಯುವಸಮೂಹವನ್ನು ಬಲವಂತವಾಗಿ ದೂರ ಸರಿಸಲು ವಿಫಲಯತ್ನ ನಡೆಸಿದ ನಂತರ ಇಂಡಿಯಾ ಗೇಟ್ ಸುತ್ತಮುಲ್ಲಿನ 34 ಕಿ.ಮೀ. ಅಂತರದಲ್ಲಿ ಸಿಆರ್‌ಪಿಸಿ ಸೆಕ್ಷನ್ 144 ಪ್ರಕಾರ ಪ್ರತಿಬಂಧಕಾಜ್ಞೆ ಜಾರಿಮಾಡಲಾಗಿದೆ. ಈ ಪ್ರದೇಶದಲ್ಲಿ ಐದಕ್ಕಿಂತ ಹೆಚ್ಚು ಜನ ಜಮಾಯಿಸಿದರೆ ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಬಸ್ಸುಗಳಿಗೆ ಕಲ್ಲು, ಬಸ್ ಮೇಲೇರಿದ ಯುವಕರು
ಜಪ್ಪಯ್ಯ ಅಂದ್ರೂ ಜಗ್ಗದ ಯುವಕರು ಮತ್ತು ಯುವತಿಯರು ಇಂಡಿಯಾ ಗೇಟ್ ಬಳಿ ಬಂದ ಬಸ್ಸುಗಳ ಮೇಲೆ ಹತ್ತಿ ಪ್ರತಿಭಟಿಸುತ್ತಿದ್ದಾರೆ. ಕೆಲ ಬಸ್ಸುಗಳಿಗೆ ಕಲ್ಲು ಕೂಡ ತೂರಲಾಗಿದೆ. ಜನರನ್ನು ನಿಯಂತ್ರಿಸಲು ಪ್ಯಾರಾ ಮಿಲಿಟರಿ ಪಡೆಯನ್ನು ಕರೆತರಲಾಗಿದೆ. ಆದರೆ, ಇಂದು ಯಾವುದು ಅಶ್ರುವಾಯು ಸಿಡಿಸಿಲ್ಲ, ಲಾಠಿ ಪ್ರಹಾರ ಮಾಡಿಲ್ಲ ಮತ್ತು ನೀರು ಕ್ಯಾನನ್‌ನಿಂದ ದಾಳಿ ಮಾಡಲಾಗಿಲ್ಲ.

ಇಂಡಿಯಾ ಗೇಟ್ ಬಳಿ ಗಲಾಟೆಯೋ ಗಲಾಟೆ
ಅಲ್ಲಿ ಅಡ್ಡಾಡುವ ಬಸ್ ಮುಂದೆ ಸರಿಯಬಾರದೆಂದು ಕೆಲವರು ಗಾಳಿ ತೆಗೆದರೆ, ಕೆಲವರು ಬಸ್ಸಿನ ಕೆಳಗೆ ನುಸುಳಿ ಮಲಗಿಕೊಂಡು ಅಡ್ಡಿಪಡಿಸುತ್ತಿದ್ದಾರೆ. ಪೊಲೀಸರನ್ನು ಜನರನ್ನು ನಿಯಂತ್ರಿಸುವುದು ಬಲುಸಾಹಸದ ಕೆಲಸವಾಗಿದೆ. ಯುವತಿಯರು ಲೈಟ್ ಕಂಬ ಏರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಇಂಡಿಯಾ ಗೇಟ್ ಬಳಿ ಗಲಾಟೆಯೋ ಗಲಾಟೆ.

ಇಂಡಿಯಾ ಗೇಟ್‌ಗೆ ಬರಲಿದ್ದಾರೆ ಅರವಿಂದ್ ಕೇಜ್ರಿವಾಲ್
ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಹೋರಾಟ ನಡೆಸುತ್ತಿರುವ ಯುವಕರಿಗೆ ಬೆಂಬಲ ಸೂಸಿಸಲು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಕಾರ್ಯಕರ್ತರ ಸಮೇತ ಇಂಡಿಯಾ ಗೇಟ್‌ಗೆ ಬರಲಿದ್ದಾರೆ ಎಂದು ತಿಳಿದುಬಂದಿದೆ. ಯೋಗ ಗುರು ಬಾಬಾ ರಾಮದೇವ್ ಅವರು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ.

ಸೋನಿಯಾ ಭೇಟಿ ಮಾಡಿದ ಪ್ರತಿಭಟನಾಕಾರರು
ಶನಿವಾರ ಸೋನಿಯಾ ಗಾಂಧಿ ಅವರೇ ಪ್ರತಿಭಟನಾಕಾರರನ್ನು ಭೇಟಿ ಮಾಡಿದ್ದರೂ ಅವರಿಂದ ಯಾವುದೇ ಭರವಸೆ ಸಿಕ್ಕಿರಲಿಲ್ಲ. ಭಾನುವಾರ ತಮ್ಮ ಬೇಡಿಕೆಯನ್ನು ಮುಂದಿಟ್ಟುಕೊಂಡು ಪ್ರತಿಭಟನಾಕಾರರು ಸೋನಿಯಾರನ್ನು ಮತ್ತೆ ಭೇಟಿ ಮಾಡಿದ್ದಾರೆ. ಈ ಸಮಯದಲ್ಲಿ ರಾಹುಲ್ ಗಾಂಧಿ ಕೂಡ ಉಪಸ್ಥಿತರಿದ್ದರು. ಸೋನಿಯಾ ಮನೆ ಮುಂದೆ ಧರಣಿ ಕುಳಿತಿದ್ದ ಕೆಲವರನ್ನು ಪೊಲೀಸರು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಏಳು ಮೆಟ್ರೋ ಬಂದ್
ಪ್ರತಿಭಟನಾಕಾರರು ಜಮಾಯಿಸದಂತೆ ಕಠಿಣ ಕ್ರಮಗಳನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಪಟೇಲ್ ಚೌಕ್, ಉದ್ಯೋಗ ಭವನ, ರೇಸ್ ಕೋರ್ಸ್, ಸೆಂಟ್ರಲ್ ಸೆಕ್ರೆಟೇರಿಯೇಟ್, ಖಾನ್ ಮಾರ್ಕೆಟ್, ಬಾರಾಕಂಬಾ ರೋಡ್, ಮಂಡಿ ಹೌಸ್ ಮೆಟ್ರೋ ಸ್ಟೇಷನ್‌ಗಳನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ.

ಕೊರೆಯುವ ಚಳಿಯಲ್ಲಿ ಸೈಕಲ್ ಯಾತ್ರೆ
ಕೆಟ್ಟ ಕೊರೆಯುವ ಚಳಿಯಲ್ಲಿ ನೂರಾರು ಯುವಕರು, ಯುವತಿಯರು, ವಯಸ್ಕರು, ಮಕ್ಕಳು ಗುರಗಾಂವ್‌ನಿಂದ ಇಂಡಿಯಾ ಗೇಟ್‌ವರೆಗೂ ಬೆಳಿಗ್ಗೆ 6 ಗಂಟೆಗೆ ಸೈಕಲ್ ಏರಿ ಬಂದಿದ್ದರು. ರಾತ್ರಿ ಮಾತ್ರವಲ್ಲ ಹಗಲು ಕೂಡ ದೆಹಲಿಯ ಬೀದಿಯಲ್ಲಿ ಜನರು ಸುರಕ್ಷತೆಯನ್ನು ಅನುಭವಿಸುವಂತಾಗಬೇಕು ಎಂದು ಅವರ ಒಕ್ಕೊರಲ ಆಗ್ರಹ.












Click it and Unblock the Notifications