ಕೈ ಪಡೆ ವಶಕ್ಕೆ ಯಡಿಯೂರಪ್ಪ ಅವರ ಆಪ್ತ ವಕೀಲ

ಗುರುವಾರ ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ದಿವಾಕರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಾಜಿ ಶಾಸಕ ಬೋಸ್ ರಾಜ್ ಮತ್ತಿತರರು ಆತ್ಮೀಯವಾಗಿ ಬರಮಾಡಿಕೊಂಡರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿ ತೊರೆದು ಕರ್ನಾಟಕ ಜನತಾ ಪಕ್ಷ ಕಟ್ಟಿಕೊಂಡು ಹೋದರೂ ದಿವಾಕರ್ ಅವರು ಬಿಜೆಪಿಯಲ್ಲೇ ಉಳಿದಿದ್ದರು.
ಈ ಮೊದಲು ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ದಿವಾಕರ್ ಅವರು 2004ರಲ್ಲಿ ಬಿಜೆಪಿ ಸೇರಿ, ಸಕ್ರಿಯವಾಗಿದ್ದರು. ಟಿವಿ ಮಾಧ್ಯಮಗಳ ಪ್ಯಾನೆಲ್ ಚರ್ಚೆಗಳಲ್ಲಿ ಭಾಗವಹಿಸಿ ಯಡಿಯೂರಪ್ಪ ಅವರ ಭ್ರಷ್ಟಾಚಾರ ಪ್ರಕರಣಗಳ ಬಗ್ಗೆ ಸೂಕ್ತವಾಗಿ ಸಮರ್ಥನೆ ನೀಡುತ್ತಿದ್ದರು.
ಬಿಜೆಪಿ ಸೇರಿದ ಮೇಲೆ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.
'ನಾನು ಯಾವುದೇ ಷರತ್ತುಗಳಿಲ್ಲದೆ ಕಾಂಗ್ರೆಸ್ಸಿಗೆ ಸೇರಿದ್ದೇನೆ. ಈ ಮೊದಲು ಕಾಂಗ್ರೆಸ್ಸಿನಲ್ಲಿದ್ದ ನನಗೆ ಈಗ ವಾಪಸ್ ಬಂದಿರುವುದು ಸಂತಸ ತಂದಿದೆ. ಮಾನಸಿಕವಾಗಿ ನನಗೆ ಬಿಜೆಪಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲು ಆಗಿರಲಿಲ್ಲ. ಎಲ್ಲದ್ದಕ್ಕೂ ಆರೆಸ್ಸೆಸ್ ಅನುಮತಿ ಬೇಕು ಎಂದು ದಿವಾಕರ್ ಹೇಳಿದರು.
ತಾಲೂಕು ಬಿಜೆಪಿ ಅಧ್ಯಕ್ಷರ ನೇಮಕಾತಿಗೂ ಆರೆಸ್ಸೆಸ್ ಅನುಮತಿ ಬೇಕಿತ್ತು. ನಮ್ಮಂಥವರು ಆ ವಾತಾವರಣದಲ್ಲಿ ಬದುಕಲಿಕ್ಕೆ ಸಾಧ್ಯವಿಲ್ಲ. ಜಾತ್ಯತೀತ ನೆಲೆಗಟ್ಟಿನ ಕಾಂಗ್ರೆಸ್ ಬಾವುಟ ಹಿಡಿದು ಇನ್ಮುಂದೆ ಹೋರಾಟ ಮಾಡುತ್ತೇನೆ ಎಂದು ದಿವಾಕರ್ ಹೇಳಿದರು.
ಸಿಎ ಸೈಟು ಹಗರಣ: ಶಿವಮೊಗ್ಗದಲ್ಲಿ 1.30 ದಶಲಕ್ಷ ಚದರ ಅಡಿಯ 27 CA ನಿವೇಶನಗಳನ್ನು ಆರೆಸ್ಸೆಸ್ ಕಚೇರಿಗಾಗಿ ಬಿಜೆಪಿ ಸರ್ಕಾರ ಕೇವಲ 11 ಲಕ್ಷಕ್ಕೆ ನೀಡಿದೆ. ಇದರ ವಿರುದ್ಧ ನನ್ನ ಹೋರಾಟ ಆರಂಭಿಸುತ್ತೇನೆ. ವಿಶ್ವವಿದ್ಯಾಲಯಗಳು ಆರೆಸ್ಸೆಸ್ ಹಿಡಿತದಲ್ಲಿದೆ. ಬಿಜೆಪಿಯಲ್ಲಿ ಎಲ್ಲರೂ ಕಳಂಕಿತರೇ ಎಂದು ದಿವಾಕರ್ ಹೇಳಿದ್ದಾರೆ.












Click it and Unblock the Notifications