ವಿದ್ಯಾರ್ಥಿನಿ ಹರಿಣಿ ನಿಗೂಢ ಸಾವು, ಕುಟುಂಬ ಕಂಗಾಲು

ಮೃತ ವಿದ್ಯಾರ್ಥಿಯನ್ನು ಹರಿಣಿ ಎಂದು ಗುರುತಿಸಲಾಗಿದೆ. ಈಕೆಯ ದೇಹ ಸೋಮವಾರ ಸಂಜೆ ಮನೆಯಲ್ಲಿ ನೇಣಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಆದರೆ, ಇದು ಆತ್ಮಹತ್ಯೆಯಲ್ಲ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ನನ್ನ ಮಗಳನ್ನು ನೇತು ಹಾಕಿದ್ದಾರೆ ಎಂದು ಬಾಲಕಿಯ ತಾಯಿ ಸರಸ್ವತಿ ಆರೋಪಿಸಿದ್ದಾರೆ.
ಘಟನೆ ವಿವರ: ವಿಮಾನಪುರದ ಈಸ್ಟ್ ಪ್ರೈಮರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸೋಮವಾರ ಸಂಜೆ ಈಕೆ ಎಂದಿನಂತೆ ಸಂಜೆ ಹೊತ್ತು ಮನೆಗೆ ಮರಳಿದ್ದಾಳೆ. ಈ ವೇಳೆ ತಂದೆ-ತಾಯಿ ಇಬ್ಬರೂ ಹೊರಗಡೆ ಹೋಗಿದ್ದರು. ಇವರು ಮನೆಗೆ ರಾತ್ರಿ 7ಕ್ಕೆ ವಾಪಸ್ ಬಂದು ಬಾಗಿಲು ತೆರೆದು ನೋಡಿದರೆ, ಮುದ್ದಿನ ಮಗಳು ಹರಿಣಿಯ ಶವ ನೇತಾಡುತ್ತಿರುವುದು ಕಂಡು ಬಂದಿದೆ.
ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ಇನ್ನೂ ತಿಳಿದುಬಂದಿಲ್ಲ. ಮನೆಯಲ್ಲಿ ಹರಿಣಿ ಬರೆದಿಟ್ಟಿದ್ದ ಮರಣಪತ್ರ ದೊರೆತಿದೆ. ನನ್ನನ್ನು ಹುಡುಕುವುದಕ್ಕೆ ಹೋಗಬೇಡಿ. ನಾನು ತುಂಬಾ ದೂರ ಹೋಗುತ್ತಿದ್ದೇನೆ ಎಂದು ಅದರಲ್ಲಿ ಬರೆದಿದೆ. ಎಚ್‌ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಾವಿಗೆ ಕಾರಣ ನಿಗೂಢ: ಮಂಗಳವಾರ ಶಾಲೆಯಲ್ಲಿ ಕಿರು ಪರೀಕ್ಷೆ ಇದೆ. ಬರೆಯಲು ಹೊಸ ಪೆನ್ ಬೇಕು ಎಂದು ಹೇಳಿ ತನ್ನ ತಾಯಿಗೆ ಕೇಳಿದ್ದಾಳೆ. ತಾಯಿ ಸರಸ್ವತಿ ಪೆನ್ ತರಲು ಹೊರಕ್ಕೆ ಹೋಗಿದ್ದಾರೆ. ಅಣ್ಣ ಕೂಡಾ ಹೊರಗಡೆ ಆಟ ಆಡಲು ಹೋಗಿದ್ದವನು ಹಾಗೆ ಟ್ಯೂಷನ್ ಗೆ ಹೋಗಿರುತ್ತಾನೆ. ಈ ಸಂದರ್ಭದಲ್ಲಿ ಹರಿಣಿಯಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡಿದ್ದಾಳೆ ಎಂಬ ಮಾಹಿತಿ ಇದೆ.
ಹರಿಣಿ ತಂದೆ ಶ್ರೀಧರ್ ಅವರು ಕ್ಯಾಬ್ ಡ್ರೈವರ್ ಆಗಿದ್ದು, ಹೊರಗೆ ಹೋಗಿದ್ದವರು ಮನೆಗೆ ಬಂದಿರಲಿಲ್ಲ. ತಾಯಿ ಸರಸ್ವತಿ ಅವರು ಹೇಳುವ ಪ್ರಕಾರ ಹರಿಣಿಯನ್ನು ಯಾರೋ ಕೊಂದಿರಬಹುದು. ಡೆತ್ ನೋಟ್ ಆಕೆ ಬರೆದ ಹಾಗೆ ಇಲ್ಲ ಎಂದಿದ್ದಾರೆ. ಪರೀಕ್ಷೆ ಭಯಕ್ಕೆ ಹೆದರಿ ಹರಿಣಿ ಸಾವಿಗೆ ಶರಣಾಗಿರುವ ಶಂಕೆಯೂ ವ್ಯಕ್ತವಾಗಿದೆ.












Click it and Unblock the Notifications