ತವರಿಗೆ ಮರಳದೆ ಖಿನ್ನಳಾದ ಟಿಕ್ಕಿ ಪತ್ನಿ ಆತ್ಮಹತ್ಯೆ

ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್ ಇಂಜಿನಿಯರ್ ಅಜಯ್‌ನನ್ನು ಮದುವೆಯಾಗಿರುವ ಮಮತಾ (22) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಇಬ್ಬರೂ ಒರಿಸ್ಸಾದವರಾಗಿದ್ದು ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು.
ಗುರುವಾರ ರಾತ್ರಿ ಅಜಯ್ ಮತ್ತು ಮಮತಾ ನಡುವೆ ತವರಿಗೆ ಮರಳುವ ಬಗ್ಗೆ ವಾಗ್ವಾದ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ನಂತರ ಮಮತಾ ಕೋಣೆ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾಳೆ. ಎಷ್ಟು ಹೊತ್ತಾದರೂ ಬಾಗಿಲು ತೆರೆಯದಿದ್ದರಿಂದ ಅನುಮಾನಗೊಂಡ ಅಜಯ್ ಬಾಗಿಲು ಮುರಿದು ನೋಡಿದಾಗ ಮಮತಾ ಫ್ಯಾನಿಗೆ ನೇಣು ಹಾಕಿಕೊಂಡಿದ್ದಳು.
ಕೂಡಲೆ ಆಕೆಯನ್ನು ಇಳಿಸಿ ಹತ್ತಿರ ಖಾಸಗಿ ಆಸ್ಪತ್ರೆಗೆ ಸಾಗಿಸಿದರೂ ಆಕೆ ಬದುಕಿ ಉಳಿಯಲಿಲ್ಲ. ಆಸ್ಪತ್ರೆಗೆ ತಂದಾಗಲೇ ಆಕೆ ಸಾವನ್ನಪ್ಪಿದ್ದಳು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸಾಯುವ ಮುನ್ನ ಮಮತಾ ಯಾವುದೇ ಮರಣಪತ್ರ ಬರೆದಿಟ್ಟಿರಲಿಲ್ಲ.
ಪ್ರಥಮ ಮಾಹಿತಿಯ ಪ್ರಕಾರ, ಕೊಲೆಯ ಶಂಕೆಯನ್ನು ಪೊಲೀಸರು ತಳ್ಳಿಹಾಕಿದ್ದು, ಗಂಡನ ಮೇಲೆ ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಒರಿಸ್ಸಾದಿಂದ ಶುಕ್ರವಾರ ಬಂದಿರುವ ಮಮತಾಳ ಪಾಲಕರು ಕೂಡ ಅಜಯ್ ಮೇಲೆ ಯಾವುದೇ ದೂರು ದಾಖಲಿಸಿಲ್ಲ. ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅಸಹಜ ಸಾವಿನ ಪ್ರಕರಣ ದಾಖಲಿಸಿಕೊಂಡಿದ್ದು, ಪೋಸ್ಟ್ ಮಾರ್ಟಂಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಮಮತಾಳ ಪಾಲಕರು ಹೇಳುವ ಪ್ರಕಾರ, ಆಕೆ ಬೆಂಗಳೂರು ಬಿಟ್ಟು ತನ್ನ ತಂದೆತಾಯಿಯ ಬಳಿ ಹೋಗಲು ಇಚ್ಛಿಸಿದ್ದಳು. ಅದನ್ನು ಅಜಯ್ ವಿರೋಧಿಸುತ್ತಿದ್ದ. ಆಕೆಯ ಪಾಲಕರು ಕೂಡ ಆಕೆ ಒರಿಸ್ಸಾಗೆ ಮರಳುವುದನ್ನು ವಿರೋಧಿಸಿದ್ದರು ಮತ್ತು ತಾವೇ ಸ್ವತಃ ಬೆಂಗಳೂರಿಗೆ ಬರುವುದಾಗಿ ವಾಗ್ದಾನ ನೀಡಿದ್ದರು. ಅಷ್ಟರಲ್ಲಿ ಮಮತಾ ದುಡುಕಿ ಪ್ರಾಣ ಕಳೆದುಕೊಂಡಿದ್ದಾಳೆ.












Click it and Unblock the Notifications