ಅಭಯ್ 'ದಾದಾಗಿರಿ'ಯ ಮೇಲೆ ಲೋಕಾಯುಕ್ತ ರೇಡ್

ತಮ್ಮ 'ದಾದಾಗಿರಿ'ಯಿಂದ ಅನೇಕ ರೈತರ ಆಸ್ತಿಪಾಸ್ತಿಗಳನ್ನು ಕಬಳಿಸಿದ್ದಾರೆ ಮತ್ತು ಕೋಟಿಗಟ್ಟಲೆ ಆಸ್ತಿ ಸಂಪಾದಿಸಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯ ಸುಜಿತ್ ಮುಳಗುಂದ್ ಎಂಬುವವರು ನವೆಂಬರ್ 19ರಂದು ಲೋಕಾಯುಕ್ತ ವಿಶೇಷ ಕೋರ್ಟಿಗೆ ದೂರು ಸಲ್ಲಿಸಿದ್ದರು.
ಮುಳಗುಂದ್ ಸಲ್ಲಿಸಿದ್ದ ದೂರನ್ನು ಪರಿಶೀಲಿಸಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಡಿನೆಂಬರ್ 19ರೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕೆಂದು ಪೊಲೀಸರಿಗೆ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಶನಿವಾರ, ಲೋಕಾಯುಕ್ತ ಎಸ್ಪಿ ಪಿ.ಎ. ಬಳಂಕಾರ್ ಅವರ ನೇತೃತ್ವದಲ್ಲಿ 5 ತಂಡ ಡಿ.15ರಂದು ಏಕಾಏಕಿ ದಾಳಿ ನಡೆಸಿದ್ದಾರೆ.
ಅಭಯ್ ಪಾಟೀಲ್ ಅವರ ಬಸವಗಲ್ಲಿಯ ಮನೆ, ಕಚೇರಿ, ಅವರ ಪತ್ನಿಗೆ ಸೇರಿದ ಮತ್ತೊಂದು ಮನೆಯ ಮೇಲೆ ಹಾಗು ಪಾಟೀಲ್ ರೈಸ್ ಮಿಲ್ ಮೇಲೆ ಹಠಾತ್ತನೆ ಪೊಲೀಸರು ದಾಳಿ ನಡೆಸಿದ್ದಾರೆ. ಅನೇಕ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ.
ಸುಮಾರು 7 ತಿಂಗಳ ಹಿಂದೆ ಅಭಯ್ ಪಾಟೀಲ್ ಅವರ 'ದಾದಾಗಿರಿ'ಯನ್ನು ವಿರೋಧಿಸಿ ಸಾವಿರಾರು ಕನ್ನಡಿಗರು ಮತ್ತು ಮರಾಠಿಗರು ಸೇರಿ ಬೀದಿಬೀದಿಯಲ್ಲಿ ಮೆರವಣಿಗೆ ಮಾಡಿದ್ದರು. 'ಅಭಯ್ ಪಾಟೀಲಗೆ ಧಿಕ್ಕಾರ', 'Worst MLA ever', 'ಭ್ರಷ್ಟ ಅಭಯ್‌ನನ್ನ ಕೆಳಗಿಳಿಸಿ' ಮುಂತಾದ ಸ್ಲೋಗನ್ ಹಿಡಿದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದರು.












Click it and Unblock the Notifications