ರಾಮನಗರದಿಂದ ವಿಧಾನಸಭೆಗೆ ಸ್ಪರ್ಧೆ : ಎಚ್ಡಿಕೆ ಘೋಷಣೆ

ಗುರುವಾರ ಸಂಜೆ ಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನದಲ್ಲಿ, ಕರ್ನಾಟಕದಲ್ಲಿ ಜಾತ್ಯತೀತ ಮತ್ತು ಪ್ರಾದೇಶಿಕ ಪಕ್ಷದ ಪರವಾಗಿ ಬಲವಾದ ಗಾಳಿ ಬೀಸಿದ್ದು, ಇಂತಹ ಪಕ್ಷದ ಅಗತ್ಯತೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ರಾಜ್ಯದಲ್ಲಿ ಭ್ರಷ್ಟಾಚಾರದಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಭ್ರಷ್ಟ ವಿರೋಧ ಅಲೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್‌ನಂತಹ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ಅಗತ್ಯವಾಗಿದೆ ಎಂದು ಅವರು ತಮ್ಮ ಹೆಬ್ಬಯಕೆಯನ್ನು ವ್ಯಕ್ತಪಡಿಸಿದರು.
ತಂದೆ ಮಕ್ಕಳ ಪಕ್ಷವಲ್ಲ : ನಮ್ಮದು ತಂದೆ ಮಕ್ಕಳ ಪಕ್ಷ ಎಂಬುದು ನಮ್ಮ ಕುಟುಂಬಕ್ಕೆ ಅಂಟಿದ ಶಾಪ. ಆ ಶಾಪವನ್ನು ತೊಡೆದು ಹಾಕುವುದು ನಮ್ಮ ಆದ್ಯತೆಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದ ಅವರು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಾವು, ತಮ್ಮ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ತಮ್ಮ ಸಹೋದರ ಎಚ್.ಡಿ. ರೇವಣ್ಣ ಮಾತ್ರ ಸ್ಪರ್ಧಿಸುತ್ತಿರುವುದಾಗಿ ನುಡಿದರು. ಮಾಧ್ಯಮಗಳಲ್ಲಿ ಕೇಳಿಬರುತ್ತಿರುವಂತೆ ರೇವಣ್ಣ ಅವರ ಪತ್ನಿ ಭವಾನಿ ಮತ್ತು ತಮ್ಮ ಮಗ ನಿಖಿಲ್ ನೂರಕ್ಕೆ ನೂರರಷ್ಟು ಸ್ಪರ್ಧಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇನ್ನು ಭ್ರಷ್ಟಾಚಾರಕ್ಕೆ ಬಂದರೆ, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸಾಧ್ಯವಿಲ್ಲ. ಭ್ರಷ್ಟಾಚಾರ ತೊಡೆದುಹಾಕಲು ಬಲವಾದ ಇಚ್ಛಾಶಕ್ತಿ ಬೇಕು. ಆದರೆ, ಉಳಿದ ಪಕ್ಷಗಳ ಮೇಲೆ ಜನ ನಂಬಿಕೆ ಕಳೆದುಕೊಂಡಿದ್ದಾರೆ, ಅವರಿಗೆ ಭ್ರಮನಿರಸನವಾಗಿದೆ. ಈ ಆರಾಜಕತೆಯನ್ನು ಅಳಿಸಲು ಜನರು ಯಾವುದಾದರೊಂದು ಪಕ್ಷದ ಮೇಲೆ ವಿಶ್ವಾಸವಿಡಲೇಬೇಕು. ಅದು ತಮ್ಮದೇ ಪಕ್ಷ ಎಂದು ಎದೆತಟ್ಟಿಕೊಂಡು ಕುಮಾರಸ್ವಾಮಿ ಹೇಳಿದರು.
ಭ್ರಷ್ಟಾಚಾರ ತೊಲಗಿಸಲು ಪ್ರತಿಜ್ಞೆ : ಭ್ರಷ್ಟಾಚಾರ ತೊಲಗಿಸಲು ತಮ್ಮ ಪಕ್ಷ ಕಂಕಣ ತೊಟ್ಟಿದೆ. ಚುನಾವಣೆಗೆ ಇಳಿಯುತ್ತಿರುವ ಎಲ್ಲ ಅಭ್ಯರ್ಥಿಗಳು ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ, ತೊಡಗಿದರೆ ಪಕ್ಷದಿಂದ ಮಾತ್ರವಲ್ಲ ರಾಜಕೀಯದಿಂದ ಹೊರಹಾಕಿಸಿಕೊಳ್ಳಲು ಸಿದ್ಧರಿರುವುದಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಭ್ರಷ್ಟಾಚಾರ ರಹಿತ ಸರಕಾರ ನೀಡುವುದೇ ತಮ್ಮ ಗುರಿ ಎಂದು ಕುಮಾರಸ್ವಾಮಿ ಖಡಾಖಂಡಿತವಾಗಿ ನುಡಿದರು.
ಇಷ್ಟು ವರ್ಷದ ರಾಜಕೀಯ ವೃತ್ತಿಯಲ್ಲಿ ನಾನು ಯಾವತ್ತೂ ರಾಜಕೀಯ ಮಾಡಿಲ್ಲ. 20 ತಿಂಗಳು ಅಧಿಕಾರದಲ್ಲಿದ್ದಾಗಲೂ ಮಾಡಿಲ್ಲ. ಆದರೆ, ಯಡಿಯೂರಪ್ಪನವರು ಮಾತ್ರ ವಿಶ್ವಾಸದ್ರೋಹ, ವಚನಭ್ರಷ್ಟ ಎಂಬ ಎರಡು ಪದಗಳನ್ನು ಹೇಳುತ್ತಲೇ ಬಂದಿದ್ದಾರೆ. ಅದನ್ನೇ ಪೇಟೆಂಟ್ ಮಾಡಿಕೊಂಡಿದ್ದಾರೆ. ಅದನ್ನೇ ಸದಾನಂದ ಗೌಡರ ಮೇಲೂ ಬಳಸಿದರು, ಈಗ ಜಗದೀಶ್ ಶೆಟ್ಟರ ಮೇಲೂ ಬಳಸುತ್ತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ಬಿಜೆಪಿ ಪಕ್ಷದಿಂದ ನಮಗೆ ಸ್ಪರ್ಧೆಯೇ ಇಲ್ಲ. ನಮಗೇನಿದ್ದರೂ ಕಾಂಗ್ರೆಸ್ ಪ್ರತಿಸ್ಪರ್ಧಿ. ಆದರೆ ಕಾಂಗ್ರೆಸ್ ಈಗಾಗಲೆ ಒಡೆದ ಮನೆಯಂತಾಗಿದೆ. ಚುನಾವಣೆಯ ನಂತರವೂ ಯಾವುದೇ ರಾಷ್ಟ್ರೀಯ ಪಕ್ಷದ ಜೊತೆ ಸಖ್ಯ ಬೆಳೆಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಪ್ರಾದೇಶಿಕ ಪಕ್ಷವಾದ ಕೆಜೆಪಿ ಕೈಹಿಡಿಯುವುದೆ ಎಂಬ ಪ್ರಶ್ನೆಗೆ, ಸ್ವಾಭಿಮಾನಕ್ಕೆ ಧಕ್ಕೆಯಾಗದಿದ್ದರೆ ಚುನಾವಣೆಯ ನಂತರ ಪರಿಶೀಲಿಸುವುದಾಗಿ ಅವರು ಮುಂದೆ ನಡೆಯಬಹುದಾದ ಮೈತ್ರಿಕೂಟದ ಬಗ್ಗೆ ಸೂಚನೆ ನೀಡಿದರು.
ದಾರಿತಪ್ಪಿಸಿದ ಅಧಿಕಾರಿಗಳು : ಡಿನೋಟಿಫಿಕೇಷನ್ ನಿಂದಾಗಿ ರಾಜ್ಯದ ಬೊಕ್ಕಸಕ್ಕೆ ಆಗಿರುವ ನಷ್ಟದ ಕುರಿತಂತೆ ಸಿಎಜಿ ನೀಡಿರುವ ವರದಿಯ ಬಗ್ಗೆ ಮಾತನಾಡಿದ ಅವರು, 93 ಡಿನೋಟಿಫಿಕೇಷನ್ ಕೇಸುಗಳಲ್ಲಿ 6ರಲ್ಲಿ ಮಾತ್ರ ತಮ್ಮ ಹೆಸರು ಪ್ರಸ್ತಾಪವಾಗಿದೆ. ಅವು ಕೂಡ ತಾಂತ್ರಿಕ ದೋಷದಿಂದಾಗಿ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತಮ್ಮ ಹೆಸರು ನಮೂದಾಗಿದೆ. ಈ ಎಲ್ಲ ಹಗರಣಗಳು ನಡೆಯುತ್ತಿರುವುದು ನೌಕರಶಾಹಿಯಿಂದ. ಅಧಿಕಾರಿಗಳೇ ದಾರಿತಪ್ಪಿಸುತ್ತಿದ್ದಾರೆ. ಅವರು ನಂಬಿಕೆ ಕಳೆದುಕೊಂಡಿದ್ದಾರೆ. ಇನ್ನು ಮುಂದೆ ಕಣ್ಣಿಗೆ ಮಣ್ಣೆರಚದಂತೆ ಎಚ್ಚರವಹಿಸುವುದಾಗಿ ಅವರು ನುಡಿದರು.
ರಾಜ್ಯ ಎದುರಿಸುತ್ತಿರುವ ವಿದ್ಯುತ್, ನೀರಾವರಿ ಮತ್ತು ಕುಡಿಯುವ ನೀರಿನ ಕೊರತೆಯ ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ಎಚ್‌ಡಿಕೆ, ವಿದ್ಯುತ್ ಕೊರತೆಯನ್ನು ನೀಗಿಸಲು ಜೆಡಿಎಸ್ ಅನೇಕ ಮಾರ್ಗಗಳನ್ನು ಕಂಡುಕೊಂಡಿದೆ ಎಂದು ಅವರು ಪತ್ರಕರ್ತ ಎಚ್.ಆರ್. ರಂಗನಾಥ್ ನಡೆಸಿದ ಸಂದರ್ಶನದಲ್ಲಿ ವಿವರಿಸಿದರು.












Click it and Unblock the Notifications