ಸಿಎಂ ಶೆಟ್ಟರ್ ಪದಚ್ಯುತಿಗೊಳಿಸಲು ಈಶ್ವರಪ್ಪ ಹುನ್ನಾರ

ನಮ್ಮ ನಾಯಕರಾದ ಯಡಿಯೂರಪ್ಪನವರು ಪದೇ ಪದೇ ಸರಕಾರ ಉರುಳಿಸುವ ಕೆಲಸಕ್ಕೆ ಕೈಹಾಕುವುದಿಲ್ಲ ಎಂದು ಹೇಳುತ್ತಿದ್ದಾರೆ. ಆದರೂ, ಈಶ್ವರಪ್ಪ ತಾಕತ್ತಿದ್ದರೆ ಸರಕಾರ ಉರುಳಿಸಿ ಎಂದು ಯಡಿಯೂರಪ್ಪನವರಿಗೆ ಸವಾಲು ಹಾಕುತ್ತಿದ್ದಾರೆ. ಇದೊಂದು ಹಾಸ್ಯಾಸ್ಪದ ಹೇಳಿಕೆ ಎಂದು ಹರೀಶ್ ಕಿಡಿಕಾರಿದ್ದಾರೆ.
ಯಡಿಯೂರಪ್ಪ ಅವರ ಕೆಜೆಪಿ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಹರೀಶ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹಾವೇರಿ ಸಮಾವೇಶಕ್ಕೆ ಸಿಕ್ಕ ಅಭೂತಪೂರ್ವ ಜನಬೆಂಬಲ ನೋಡಿ ಬಿಜೆಪಿ ದಂಗು ಬಡಿದಿದೆ. ಬಿಜೆಪಿಯಲ್ಲಿ ಈಗ ಹೇಳುವವರು ಕೇಳುವವರು ಯಾರೂ ಇಲ್ಲ ಎಂದು ಜರಿದಿದ್ದಾರೆ.
ಸದಾನಂದ ಗೌಡ ಅವರಿಗೆ ನಿಯತ್ತು ಅನ್ನೋದೇ ಇಲ್ಲ. ಯಡಿಯೂರಪ್ಪನವರ ಕೃಪಾಕಟಾಕ್ಷದಿಂದ ಅವರು ಮುಖ್ಯಮಂತ್ರಿ ಪದವಿಗೆ ಏರಿದರು ಅನ್ನುವ ಕೃತಜ್ಞತೆ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಅವರ ವಿರುದ್ದ ಹೇಳಿಕೆ ನೀಡುವ ಮುನ್ನ ಒಂದು ಕ್ಷಣ ಆಲೋಚಿಸಲಿ ಎಂದು ಹರೀಶ್ ಬುದ್ದಿ ಮಾತನ್ನು ಹೇಳಿದ್ದಾರೆ.
ನಿಮ್ಮ ಜೊತೆ ಗುರುತಿಸಿಕೊಂಡಿರುವ ಶಾಸಕರ ರಾಜೀನಾಮೆ ತೆಗೆದುಕೊಳ್ಳಿ ಎಂದು ಯಡಿಯೂರಪ್ಪನವರಿಗೆ ಈಶ್ವರಪ್ಪ ಸವಾಲೆಸೆದಿದ್ದಾರೆ. ಈ ವಿಷಯದಲ್ಲಿ ಯಡಿಯೂರಪ್ಪ ತನ್ನ ನಿರ್ಧಾರವನ್ನು ಸ್ಪಷ್ಟ ಪಡಿಸಿದ್ದಾರೆ. ಆದರೂ ಈಶ್ವರಪ್ಪನವರ ಹೇಳಿಕೆ ನೋಡಿದರೆ ಅವರ ಮನಸ್ಥಿತಿ ಅರ್ಥವಾಗುತ್ತದೆ ಎಂದು ಹರೀಶ್ ಹೇಳಿದ್ದಾರೆ.
ನನ್ನ ನಿಯತ್ತು ಯಡಿಯೂರಪ್ಪನವರ ಮೇಲೆ, ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ಅವರು ಎಲ್ಲಿ ಇರುತ್ತಾರೋ ಅಲ್ಲಿ ನಾನು ಇರುತ್ತೇನೆ ಮತ್ತು ಅವರ ಆದೇಶವನ್ನು ಪಾಲಿಸುತ್ತೇನೆ ಎಂದು ಬಿ.ಪಿ.ಹರೀಶ್ ಮಗುದೊಮ್ಮೆ ಸ್ಪಷ್ಟ ಪಡಿಸಿದ್ದಾರೆ.












Click it and Unblock the Notifications