ಬಿಜೆಪಿ ಬಿಟ್ಟ ನೋಟಿಸ್ ಎಂಬ ಗಾಳಿಪಟ

"ಕೆಜೆಪಿಯ ಹಾವೇರಿ ಸಮಾವೇಶಕ್ಕೆ ಹೋಗಿದ್ದ 14 ಶಾಸಕರು ಹಾಗೂ 7 ವಿಧಾನಪರಿಷತ್ ಸದಸ್ಯರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಬಿಜೆಪಿ ಕೋರ್ ಕಮಿಟಿ ನಿರ್ಧರಿಸಿದೆ. ನೋಟಿಸ್ಗೆ ಉತ್ತರಿಸಲು ಮೂರು ದಿನಗಳ ಗಡವು ನೀಡಿದೆ" ಎಂಬ ಎರಡು ಸಾಲಿನ ಸುದ್ದಿಯನ್ನು ಸಭೆ ನಡೆಯುತ್ತಿದ್ದ ಬೆಳಗಾವಿ ಪ್ರವಾಸಿ ಮಂದಿರದ ಕಾರಿಡಾರ್ನಲ್ಲಿ ಹರಿಬಿಡಲಾಯಿತು.
ಬಿಜೆಪಿ ಎರಡನೇ ಹಂತದ ನಾಯಕರ ಮೂಲಕ ಈ ಸುದ್ದಿ ಹರಡಿಸಿದ ಬಿಜೆಪಿ ಕೋರ್ ಕಮಿಟಿ, ಇದಕ್ಕೆ ಕೆಜೆಪಿ ಪಾಳೆಯದ ರಿಯಾಕ್ಷನ್ ಗಮನಿಸಿದರು. ನಂತರ ಸಭೆ ಮುಗಿಸಿ ಹೊರಬಂದ ಬಿಜೆಪಿ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ, ಕೆಜೆಪಿ ಬೆಂಬಲಿಗರ ವಿರುದ್ದ ಕ್ರಮ ಕೈಗೊಳ್ಳುವ ಕಾರ್ಯವನ್ನು ಎರಡು ದಿನ ಮುಂದೂಡಿದ್ದೇವೆ. ಯಾವ ನೋಟಿಸ್ ಅನ್ನು ನೀಡಿಲ್ಲ ಅಂತ ವಿಕಟ ನಗೆ ಬೀರುತ್ತಾ ಸ್ಪಷ್ಟಪಡಿಸಿದ್ರು.
ಬಿಜೆಪಿ ಎರಡನೇ ಹಂತದ ನಾಯಕರು ಹಬ್ಬಿಸಿದ ಸುದ್ದಿಯನ್ನು ಖಚಿತಪಡಿಸಿಕೊಳ್ಳಲು ಮೊದಲ ಹಂತದ ನಾಯಕರು ಸರಿಯಾಗಿ ಸ್ಪಂದಿಸದೇ ನುಣಚಿಕೊಂಡಿದ್ದೇ ಸುಳ್ಳು ಸುದ್ದಿ ನಂಬುವಂತಾಯಿತು. ಮೊದಲು ಸುದ್ದಿ ಕೊಡಬೇಕೆಂಬ ಭರಾಟೆಯಲ್ಲಿ ಎಲೆಕ್ಟ್ರಾನಿಕ್ ಮೀಡಿಯಾಗಳು ಬಿಜೆಪಿ ಹಿರಿಯರ ಬೀಸಿದ ಬಲೆಗೆ ಬಿದ್ದು ಬೇಸ್ತು ಬಿದ್ದವು.
ಈ ಸುದ್ದಿಯನ್ನು ನಾವೂ ಕೂಡ ಖಚಿತ ಪಡಿಸಿಕೊಳ್ಳದೇ ಪ್ರಕಟಿಸಿದ್ದು ನಮ್ಮ ತಪ್ಪು ಎಂದು ಒಪ್ಪಿಕೊಳ್ಳುತ್ತೇವೆ. ಮಾಧ್ಯಮಗಳ ನಡುವಿನ ಪೈಪೋಟಿ ರಾಜಕಾರಣಿಗಳಿಗೆ ಆಟವಾಡಿಸುವ ಅಸ್ತ್ರವಾಗಿರುವುದಂತೂ ಖಚಿತ. ತಪ್ಪು ಮಾಹಿತಿಯನ್ನು ಬಿತ್ತಿದ ಪಕ್ಷದ ಕುಚೋದ್ಯವನ್ನು ಮಾಧ್ಯಮಗಳು ಇವತ್ತಲ್ಲ ನಾಳೆ ವಿಚಾರಿಸಿಕೊಳ್ಳುವುದೂ ಅಷ್ಟೇ ಖಚಿತ.












Click it and Unblock the Notifications