ಕ್ಷುಲ್ಲಕ ಕಾರಣಕ್ಕೆ ಹರಿದ ನೆತ್ತರು, ಸಾವಿಗೆ ಗ್ರಾಮವೇ ಕೊರಗಿತು

ಮೃತಪಟ್ಟ ಯುವಕನನ್ನು 25 ವರ್ಷದ ಮಹೇಂದ್ರ ಎಂದು ಗುರುತಿಸಲಾಗಿದೆ. ವಡಿಕೆ ಹೊಸಹಳ್ಳಿ ಗ್ರಾಮದ ನಿವಾಸಿ ಮಹೇಂದ್ರ ಶವ ಅರಸೇಗೌಡರ ಬಾವಿಯಲ್ಲಿ ಪತ್ತೆಯಾಗಿದೆ.
ಕಳೆದ ರಾತ್ರಿ ಸ್ನೇಹಿತರಾದ ಅನಿಲ ಮತ್ತು ಸ್ವಾಮಿ ಎಂಬುವರ ಜೊತೆ ಯಾವುದೋ ಕ್ಷುಲ್ಲಕ ವಿಚಾರಕ್ಕೆ ಮಹೇಂದ್ರ ಜಗಳ ಆಡಿದ್ದಾನೆ.
ಅಪರ ವೇಳೆಯಲ್ಲಿ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಅದರೆ, ಮತ್ತೆ ಮನೆಗೆ ಹಿಂತಿರುಗಿಲ್ಲ. ನಿನ್ನೆ ಪೂರ್ತಿ ಮಹೇಂದ್ರನಿಗಾಗಿ ಹುಡುಕಾಟ ನಡೆಸಲಾಗಿದೆ. ಅದರೆ, ಬುಧವಾರ ಬೆಳಗ್ಗೆ ಮಹೇಂದ್ರನ ಶವ ಬಾವಿಯಲ್ಲಿ ಸಿಕ್ಕಿದೆ.
ಅರಸೇಗೌಡರು ತಮ್ಮ ಜಮೀನಿಗೆ ಹೋಗಿದ್ದಾಗ ಬಾವಿ ಬಳಿ ಬೈಕೊಂದು ನಿಂತಿರುವುದನ್ನು ಕಂಡಿದ್ದಾರೆ. ಯಾರ ಬೈಕು ಎಂದು ನೋಡಲು ಹತ್ತಿರ ಹೋಗಿದ್ದಾರೆ.
ಆಗ ಅವರ ಕಣ್ಣಿಗೆ ಬಾವಿಯಲ್ಲಿ ಶವ ತೇಲುತ್ತಿರುವುದು ಕಂಡಿದೆ. ಕೂಡಲೇ ಆಳು ಮಕ್ಕಳನ್ನು ಕರೆಸಿ ಶವವನ್ನು ಹೊರಗೆ ತೆಗೆಸಿದ್ದಾರೆ.
ನಂತರ ಪೊಲೀಸರು ಬಂದು ಮುಂದಿನ ಕ್ರಮ ಜರುಗಿಸಿದ್ದಾರೆ.ಮಹೇಂದ್ರನ ಕಾಲಿಗೆ ದೊಡ್ಡ ಕಲ್ಲೊಂದು ಕಟ್ಟಲಾಗಿದ್ದು, ಪ್ರಜ್ಞೆ ತಪ್ಪಿಸಿ ಬಾವಿಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಶವ ಬೇಗ ಮೇಲಕ್ಕೆ ತೇಲಿ ಬರಬಾರದು ಎಂದು ಕಲ್ಲು ಕಟ್ಟಲಾಗಿದೆ.
ಆರೋಪಿಗಳಾದ ಅನಿಲ ಮತ್ತು ಸುನೀಲ ನಾಪತ್ತೆಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಮಹೇಂದ್ರ ಇಡೀ ಗ್ರಾಮದಲ್ಲಿ ಒಳ್ಳೆ ಹೆಸರು ಗಳಿಸಿದ್ದ. ಯಾರ ತಂಟೆಗೂ ಹೋದವನಲ್ಲ. ಅನಿಲ ಮತ್ತು ಸುನೀಲ ಇಬ್ಬರು ಆಗಾಗ ಈತನನ್ನು ಕೆಣಕುತ್ತಿದ್ದರು ಅದರೂ ಗೆಳೆಯರು ಎಂಬ ಕಾರಣಕ್ಕೆ ಹೆಚ್ಚು ಪ್ರತಿಕ್ರಿಯೆ ನೀಡದೆ ಮಹೇಂದ್ರ ನಿರ್ಲಕ್ಷ್ಯ ಮಾಡುತ್ತಿದ್ದ.
ರಾತ್ರಿ ವೇಳೆ ಏಕಾಂಗಿಯಾಗಿ ಅರಸೇಗೌಡರ ಜಮೀನಿನ ಬಳಿ ಮಹೇಂದ್ರ ಬಂದಿದ್ದು ಏಕೆ? ಅನಿಲ ಮತ್ತು ಸುನೀಲ ಹೇಗೆ ಕೊಲೆಗೈದರು ಎಂಬುದರ ಬಗ್ಗೆ ಅನೇಕ ವದಂತಿಗಳು ಹಬ್ಬುತ್ತಿದೆ. ಆದರೆ, ಆರೋಪಿಗಳು ಸೆರೆ ಸಿಕ್ಕುವ ತನಕ ನಿಜವಾಗಿ ನಡೆದಿದ್ದು ಏನು ಎಂಬುದು ತಿಳಿಯುವಂತಿಲ್ಲ. ಒಟ್ಟಾರೆ, ಮಹೇಂದ್ರನ ಸಾವಿಗೆ ಇಡೀ ಗ್ರಾಮವೇ ಶೋಕಿಸಿದೆ.












Click it and Unblock the Notifications