ಬಿಜೆಪಿ ಸರಕಾರದ ಉಳಿವಿಗೆ ಸಂಖ್ಯಾಶಾಸ್ತ್ರ

ಪಕ್ಷದ ವಿರುದ್ಧ ತೊಡೆ ತಟ್ಟಿದ ಈ ಶಾಸಕರ ಬಗ್ಗೆ ಸರೀಯಾದ ಕ್ರಮ ಕೈಗೊಳ್ಳುವ ಬಗ್ಗೆ ಬಿಜೆಪಿ ಕೋರ್ ಕಮಿಟಿ ಬುಧವಾರ 12ರಂದು ಸಭೆ ಸೇರಿ ನಿರ್ಧರಿಸಲಿದೆ ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಶಿಳ್ಳೆ ಹೊಡೆದಿದ್ದಾರೆ.
ಸೋಮವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಡಿಯೂರಪ್ಪನವರ ಹೊಸಪಕ್ಷದ ಉದ್ಘಾಟನೆಯಲ್ಲಿ ಪಾಲ್ಗೊಂಡ ಶಾಸಕರ ವಿರುದ್ಧ ಸೂಕ್ತಕ್ರಮ ಜರುಗಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ಹಾವೇರಿ ಸಮಾವೇಶದಲ್ಲಿ ಭಾಗವಹಿಸಿದ್ದ ಆ 14 ಶಾಸಕರ ಪಟ್ಟಿ ಇಂತಿದೆ : ನೆಹರು ಓಲೇಕಾರ್ (ಹಾವೇರಿ), ಎಸ್ ಐ ಚಿಕ್ಕನಗೌಡ್ರು (ಕುಂದಗೋಳ), ಸುರೇಶ್ ಗೌಡ ಪಾಟೀಲ್ (ಬ್ಯಾಡಗಿ), ಜಿ. ಶಿವಣ್ಣ (ರಾಣಿಬೆನ್ನೂರು), ಹರತಾಳು ಹಾಲಪ್ಪ (ಸೊರಬ), ಬಿಪಿ ಹರೀಶ್ (ಹರಿಹರ), ಚಂದ್ರಪ್ಪ (ಹೊಳಲ್ಕೆರೆ), ಡಿಸಿ ಸುರೇಶ್ (ತರೀಕೆರೆ), ಲಕ್ಷ್ಮೀನಾರಾಯಣ (ಬೈಂದೂರು), ರಾಮಣ್ಣ ಲಮಾಣಿ (ಶಿರಹಟ್ಟಿ), ಶ್ರೀಶೈಲಪ್ಪ ಬಿದರೂರು (ಗದಗ), ಸುನಿಲ್ ವಲ್ಯಾಪುರೆ (ಚಿಂಚೋಳಿ), ಸಿಸಿ ಪಾಟೀಲ್ (ನರಗುಂದ), ಡಾ. ವಿಶ್ವನಾಥ್ (ಕಡೂರು).
ಈ 14 ಶಾಸಕರು ಯಡಿಯೂರಪ್ಪ ಬಲಪ್ರದರ್ಶನದ ಕೆಜಿಪಿ ಸಮಾವೇಶದ ವೇದಿಕೆಯಲ್ಲಿ ಆಸೀನರಾಗಿ ಈಶ್ವರಪ್ಪ ಹಾಗೂ ಸದಾನಂದಗೌಡ ಕಂಪನಿಯ ವಿರುದ್ಧ ಮೀಸೆ ತಿರುವಿದ್ದರು. ವೇದಿಕೆ ಹತ್ತದೆ ಸಭೆಯ ಮುಂದಿನ ಸಾಲಿನ ಕುರ್ಚಿಯಲ್ಲೇ ಕುಳಿತು ಮೀಸೆ ತಿರುವಿದ ಶಾಸಕ ಬೆಲ್ಲದ ಆಂಡ್ ಕಂಪನಿಯ ಮಾಲಿಕ ಚಂದ್ರಕಾಂತ್ ಬೆಲ್ಲದ್.
ಹಳ್ಳಿಕೇರಿ ಗುದ್ಲೆಪ್ಪ ಕಾಲೇಜಿನ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್ ಸಮಾವೇಶದ ಶಾಮಿಯಾನಾ ತನಕ ಬಾರದೆ ಭಾನುವಾರ ಹಾವೇರಿಯಲ್ಲೆ ಅಡ್ಡಾಡಿಕೊಂಡಿದ್ದ ಭಾಜಪದ ನಿಷ್ಠಾವಂತ ಸಚಿವರ ಹೆಸರುಗಳು ಮತ್ತು ಅವರ ಇಲಾಖೆಗಳು ಹೀಗಿವೆ:
ಶೋಭಾ ಕರಂದ್ಲಾಜೆ (ಇಂಧನ), ಸಿಎಂ ಉದಾಸಿ (ಲೋಕೋಪಯೋಗಿ), ಉಮೇಶ್ ಕತ್ತಿ (ತೋಟಗಾರಿಕೆ), ಮುರುಗೇಶ್ ನಿರಾಣಿ (ಬೃಹತ್ ಕೈಗಾರಿಕೆ), ಬಸವರಾಜ್ ಬೊಮ್ಮಾಯಿ (ಜಲಸಂಪನ್ಮೂಲ), ರೇವುನಾಯಕ್ ಬೆಳಮಗಿ (ಪಶುಸಂಗೋಪನೆ), ರೇಣುಕಾಚಾರ್ಯ (ಅಬಕಾರಿ).
ಇವರೆಲ್ಲರ ಜತೆಗೆ ಶಿವರಾಜ್ ಸಜ್ಜನ (ಎಂಎಲ್ ಸಿ - ಹಾವೇರಿ) ಮನೆಯಲ್ಲಿ ಭಾನುವಾರ ಬೆಳಗ್ಗೆ ಏರ್ಪಡಿಸಲಾಗಿದ್ದ ಚಹಾ ಕೂಟದಲ್ಲಿ ಭಾಗವಹಿಸಿದ್ದ ಸಂಸದರೆಂದರೆ ಶಿವಕುಮಾರ್ ಉದಾಸಿ (ಹಾವೇರಿ), ಜನಾರ್ಧನ ಸ್ವಾಮಿ (ಚಿತ್ರದುರ್ಗ), ಜಿ ಬಸವರಾಜು (ಉಚ್ಛಾಟಿತ ತುಮಕೂರು ಸಂಸದ) ಮತ್ತು ಬಿ.ವೈ. ರಾಘವೇಂದ್ರ (ಶಿವಮೊಗ್ಗ).
ಇನ್ನು ಕೆಜೆಪಿ ಹುರಿಯಾಳು ಎಂಡಿ ಲಕ್ಷ್ಮೀನಾರಾಯಣ್ ಜತೆಗೆ ವಿಧಾನ ಪರಿಷತ್ತಿನ ಹಲವಾರು ಸದಸ್ಯರು ಸಮಾವೇಶದಲ್ಲಿ ಪಟ್ಟಾಂಗ ಹಾಕಿದ್ದರು. ಅದರೆ ಅವರೆಲ್ಲ ಆಟಕ್ಕುಂಟು, ಶಾಸಕರ ತಲೆ ಎಣಿಕೆಗೆಗಳ ಲೆಕ್ಕಕ್ಕಿಲ್ಲ.
ವಿಧಾನ ಸಭೆಯಲ್ಲಿ ಪಕ್ಷಗಳ ಇವತ್ತಿನ ಬಲಾಬಲ ಇಂತಿದೆ. ಒಟ್ಟು 224 (ಇದರಲ್ಲಿ 1 ನಾಮನಿರ್ದೇಶನವಾದ್ದರಿಂದ ಶಾಸಕರ ಬಲಾಬಲದಲ್ಲಿ ಲೆಕ್ಕಕ್ಕಿಲ್ಲ)
ಭಾಜಪ : 104 (ಸಭಾಧ್ಯಕ್ಷ ಬೋಪಯ್ಯ ಸೇರಿ)
ಕಜಪ : 14
ಕಾಂಗ್ರೆಸ್ : 71
ಜೆಡಿಎಸ್ : 26
ಪಕ್ಷೇತರ : 7 (ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಸೇರಿ)
ಖಾಲಿ : 2 (ಹಾಲಾಡಿ ಶ್ರೀನಿವಾಸ ಶೆಟ್ಟಿ, ಯಡಿಯೂರಪ್ಪ ರಾಜೀನಾಮೆಯಿಂದಾಗಿ)
ದಕ್ಷ್ಣಿಣ ಭಾರತದಲ್ಲಿ ಮೊದಲ ಬಾರಿಗೆ ಅಸ್ಥಿತ್ವಕ್ಕೆ ಬಂದ ಬಿಜೆಪಿ ಸರಕಾರ ಕರ್ನಾಟಕದಲ್ಲಿ ಈಗ ಉಳಿಯುವುದಕ್ಕೆ ಅಗತ್ಯವಾದ ಶಾಸಕರ ಸಂಖ್ಯೆ 113. ಇನ್ನು ಸರಕಾರ ಬೀಳತ್ತೋ, ಕಳಚುತ್ತೋ? ಶಾಸಕರ ಸಂಖ್ಯಾಶಾಸ್ತ್ರದ ಸಂಕನಲ ವ್ಯವಕಲನ ಭಾಗಾಕಾರ ಗುಣಾಕಾರ ಹಾಕುವ ಕೆಲಸ ನಿಮಗೆ ಬಿಟ್ಟದ್ದು!












Click it and Unblock the Notifications