12.12.12 ಬಿಜೆಪಿ vs ಕೆಜೆಪಿ ಅಂತಿಮ ತೀರ್ಪು
ಬೆಂಗಳೂರು, ಡಿ.11: ಕೆಜೆಪಿ ಸಮಾವೇಶಕ್ಕೆ ಏಕೆ ಹೋಗಿದ್ರಿ? ಯಡಿಯೂರಪ್ಪ ಅವರ ಹಿಂದೆ ಮುಂದೆ ಯಾಕೆ ಓಡಾಡುತ್ತಿದ್ದೀರಾ? ಎಂದು ಬಿಜೆಪಿ ಶೋಕಾಸ್ ನೀಡಿದರೆ ಅದಕ್ಕೆ ತಕ್ಕ ಉತ್ತರ ನೀಡಲು 14 ಜನ ಶಾಸಕರು ಸಿದ್ಧರಾಗಿದ್ದಾರೆ. ಬಿಜೆಪಿ ಏನಾದರೂ ಅನರ್ಹತೆ ಕ್ರಮಕ್ಕೆ ಮುಂದಾದರೆ, ತಕ್ಷಣವೇ ರಾಜೀನಾಮೆ ನೀಡಿ ಹೊರ ನಡೆಸಲು ಶಾಸಕರು ನಿರ್ಧರಿಸಿದ್ದಾರೆ.
ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ಬೆಂಬಲಿತ ಶಾಸಕರು ಹಂತ ಹಂತವಾಗಿ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಮೊದಲ ಹಂತದ ಸಭೆ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿ ನಿವಾಸದಲ್ಲಿ ನಡೆದಿದೆ. ಬೆಳಗಾವಿಯಲ್ಲಿ ಇನ್ನೊಂದಿಷ್ಟು ಶಾಸಕರು ಸಭೆ ನಡೆಸುವ ಸಾಧ್ಯತೆಯಿದೆ.
12.12.12 ಅಂತಿಮ ತೀರ್ಪು: ನಾಳೆ ಬೆಳಗಾವಿಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ದೆಹಲಿಯಿಂದ ಧರ್ಮೇಂದ್ರ ಪ್ರಧಾನ್ ಕೂಡಾ ಆಗಮಿಸುತ್ತಿದ್ದಾರೆ. ಶಾಸಕರ ಅನರ್ಹತೆ, ಸಂಪುಟ ಸಚಿವರ ಖಾತೆ ಬದಲಾವಣೆ ಬಗ್ಗೆ ನಿರ್ಣಯ ಕೈಗೊಳ್ಳುವ ಎಲ್ಲಾ ಲಕ್ಷಣಗಳಿದೆ.
ಕೆಜೆಪಿ ಕಡೆಗೆ ಇನ್ನಷ್ಟು ಮಂದಿ ಶಾಸಕರು ತಿರುಗಿದರೂ ಆಶ್ಚರ್ಯವಿಲ್ಲ. ಕಾರಣ, ಸಂಪುಟ ಪುನರ್ ರಚನೆ ಸದ್ಯಕ್ಕಿಲ್ಲ ಎಂದು ಶೆಟ್ಟರ್ ಹಾಕಿದ ಬಾಂಬ್ ಅನೇಕರಿಗೆ ಭಾರಿ ಹೊಡೆತ ನೀಡಲಿದೆ. ಸಂಪುಟದಲ್ಲಿ ಖಾಲಿ ಉಳಿದಿರುವುದು ಎರಡೇ ಸ್ಥಾನವಾದರೂ ಆಕಾಂಕ್ಷಿಗಳ ಪಟ್ಟಿ ಮಾತ್ರ ಹನುಮಂತ ಬಾಲದಂತೆ ಬೆಳೆದಿದೆ.
ಮುಖ್ಯಮಂತ್ರಿಗಳ ಹೇಳಿಕೆಯಿಂದ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕೆಜಿಎಫ್ ಶಾಸಕ ವೈ ಸಂಪಂಗಿ, ನೆಲಮಂಗಲ ನಾಗರಾಜು, ಅಪ್ಪುಪಟ್ಟಣ ಶೆಟ್ಟಿ, ರಾಜೂಕಾಗೆ, ಅಭಯ್ ಪಾಟೀಲ್ ಅವರು ನಿರಾಸೆ ಅನುಭವಿಸಿದ್ದಾರೆ.
ಸಚಿವ ಸ್ಥಾನ ದೊರೆಯದ ಕಾರಣ, ಇವರಲ್ಲಿ ಹಲವರು ಕೆಜೆಪಿ ಕಡೆಗೆ ವಾಲಿದರೂ ಆಶ್ಚರ್ಯವಿಲ್ಲ ಎಂಬ ಸುದ್ದಿಯಿದೆ.
ಆದರೆ, ಗೊಂದಲದಲ್ಲಿ ಬಿದ್ದಿರುವ ಬಿಜೆಪಿ ನಾಯಕರು ಶಾಸಕರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಹಿಂದು ಮುಂದು ನೋಡುತ್ತಿದ್ದಾರೆ. ಇದಕ್ಕೆ ಕಾರಣವೂ ಇದೆ.
ಕಾಂಗ್ರೆಸ್ ಆಗಲಿ, ಜೆಡಿಎಸ್ ಆಗಲಿ ಸರ್ಕಾರವನ್ನು ಬೀಳಿಸುವ ಸಾಹಸಕ್ಕೆ ಕೈ ಹಾಕುತ್ತಿಲ್ಲ. ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸಿರುವ ಯಡಿಯೂರಪ್ಪ ಅವರು ಕೂಡಾ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ ಶೆಟ್ಟರ್ ಕುರ್ಚಿ ಉರುಳಿಸಲು ಮನಸ್ಸು ಮಾಡಿಲ್ಲ.
ವಿಧಾನಸಭೆ ವಿಸರ್ಜನೆ ಮಾಡಲು ಬಿಜೆಪಿ ಕೂಡಾ ತಯಾರಿಲ್ಲ. ಚುನಾವಣೆ ಯಾರಿಗೂ ಬೇಡವಾಗಿದೆ. ಪರಿಸ್ಥಿತಿ ಹೀಗಿರುವಾಗ, ಶಾಸಕರ ವಿರುದ್ಧ ಕ್ರಮ ಜರುಗಿಸಿದರೆ 14 ಇರುವ ಸಂಖ್ಯೆ ದ್ವಿಗುಣವಾಗಿ ಪಕ್ಷಾಂತರಿಗಳ ಸಂಖ್ಯೆ ಹೆಚ್ಚಾಗುವ ಭಯ ಬಿಜೆಪಿಯನ್ನು ಆವರಿಸಿದೆ.
ಹಾಗೋ ಹೀಗೋ ಉಸಿರಾಡಿಕೊಂಡಿರುವ ಬಿಜೆಪಿ ಸರ್ಕಾರ ತಾನಾಗೇ ಆಕ್ಸಿಜೆನ್ ಮಾಸ್ಕ್ ತೆಗೆಯುವ ಸಾಹಸ ಮಾಡಲಾರದು ಎಂದೇ ನಂಬಲಾಗಿದೆ. ಶಾಸಕರ ವಲಸೆ, ಸಾಮೂಹಿಕ ರಾಜೀನಾಮೆ ನಿಯಂತ್ರಣ ಎಂದಿಗೂ ಸಾಧ್ಯವಿಲ್ಲ ಎಂಬ ಅರಿವು ಬಿಜೆಪಿಗಿದೆ.













Click it and Unblock the Notifications