KJP ಪ್ರಾದೇಶಿಕ ಪಕ್ಷದ ತುರ್ತು ಅಗತ್ಯವಿದೆ: ಸಂಕೇಶ್ವರ್

ನಿನ್ನೆ ಭಾನುವಾರ ಅತ್ತ ಯಡಿಯೂರಪ್ಪ ಹಾವೇರಿಯಲ್ಲಿ ವಿಜೃಂಭಿಸುತ್ತಿದ್ದರೆ ಇತ್ತ ಬೆಳಗಾವಿಯಲ್ಲಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾತನಾಡಿದ ಸಂಕೇಶ್ವರ ಅವರು ತಾವು KJP ಸೇರುತ್ತಿರುವುದನ್ನು ದೃಢಪಡಿಸಿದರು. ಮತ್ತು ಅದಕ್ಕೆ ಸಕಾರಣವನ್ನೂ ನೀಡಿದ್ದಾರೆ.
ಕರ್ನಾಟಕಕ್ಕೊಂದು ಪ್ರಾದೇಶಿಕ ಪಕ್ಷದ ತುರ್ತು ಅಗತ್ಯವಿದೆ. ಹಾಗಾಗಿ KJP ಸೇರಲು ನಿರ್ಧರಿಸಿರುವುದಾಗಿ ಹೇಳಿದರು. ಅಂದಹಾಗೆ ಈ ಹಿಂದೆ ಕನ್ನಡ ನಾಡು ಎಂಬ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದರು.
'ರಾಜಕಾರಣ ನನ್ನ ವೃತ್ತಿಯಲ್ಲ. ಆದರೆ ಶುದ್ಧ ಹಸ್ತವಿರುವ ಕಾರಣಕ್ಕಾಗಿ ಜನ ನನ್ನನ್ನು ಮೂರು ಬಾರಿ ಆಶೀರ್ವದಿಸಿದರು. ಬಿಜೆಪಿಯಲ್ಲೂ ನಾನು ಹಣಕ್ಕೆ ಆಸೆಪಟ್ಟವನಲ್ಲ. ಕೆಜೆಪಿಯಲ್ಲೂ ಆ ಆಸೆ ಇಲ್ಲ' ಎಂದು ಅವರು ಹೇಳಿದರು.
ಇದೇ ವೇಳೆ, 'ಕೆಜೆಪಿಯಲ್ಲಿ ಇರುವವರೆಲ್ಲ ಶುದ್ಧ ಹಸ್ತರು, ಸಮಾಜ ಸುಧಾರಕರು ಎಂದೂ ಹೇಳುವುದಿಲ್ಲ. ಾದರೆ ರಾಜ್ಯಕ್ಕೊಂದು ಬಲವಾದ ಪ್ರದೇಶಿಕ ಪಕ್ಷದ ಅಗತ್ಯವನ್ನು ನಾನು ಮನಗಂಡಿದ್ದೇನೆ' ಎಂದು ವ್ಯಾಖ್ಯಾನಿಸಿದರು.
ಪ್ರಾದೇಶಿಕ ಪಕ್ಷದ ತುರ್ತು ಅಗತ್ಯ ಏಕೆ?: ನೈರುತ್ಯ ವಲಯವನ್ನು ಹುಬ್ಬಳ್ಳಿಗೆ ತರಲು ಸಾಕಷ್ಟು ಹೋರಾಟ ಮಾಡಿದೆ. ಆಗ ಕೇಂದ್ರದಲ್ಲಿ ನಮ್ಮದೇ ಎನ್ ಡಿಎ ಸರಕಾರವಿದ್ದರೂ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಅದನ್ನು ಆಂಧ್ರಕ್ಕೆ ಧಾರೆಯೆರೆದರು. ರಾಜ್ಯದ ಸ್ವಾಭಿಮಾನ ಉಳಿಸಿಕೊಳ್ಳುವುದಕ್ಕಾಗಿ ಪ್ರಾದೇಶಿಕ ಪಕ್ಷ ಅಗತ್ಯ ಎಂಬುದನ್ನು ಆಗಲೇ ಮನಗಂಡಿದ್ದೆ. ಪ್ರಾದೇಶಿಕ ಪಕ್ಷದಿಂದ ಮಾತ್ರ ರಾಜ್ಯದ ಹಿತ ರಕ್ಷಿಸಲು ಸಾಧ್ಯವಿದೆ ಎಂದು ಸಂಕೇಶ್ವರ ಪ್ರತಿಪಾದಿಸಿದರು.












Click it and Unblock the Notifications