ರಾತ್ರೋರಾತ್ರಿ ಹರಿದ ಕಾವೇರಿ, ಸಿಡಿದೆದ್ದ ರೈತರು

ಕೃಷ್ಣರಾಜ ಸಾಗರ ಅಣೆಕಟ್ಟೆಯ 9, 10, 11, 12 ಗೇಟುಗಳಿಂದ ಸುಪ್ರೀಂಕೋರ್ಟ್ ಅಣತಿಯಂತೆ 10,000 ಕ್ಯೂಸೆಕ್ಸ್ ನೀರನ್ನು ಹರಿಯಬಿಟ್ಟಿದ್ದು, ಮಂಡ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ರೈತರ ಹಿತರಕ್ಷಣೆಯನ್ನು ಕಾಪಾಡಲು ಬಿಜೆಪಿ ಸರಕಾರ ಸಂಪೂರ್ಣ ಸೋತಿದೆ, ಕೊಟ್ಟ ಮಾತನ್ನು ಮರೆತಿದೆ ಎಂದು ಸಾವಿರಾರು ರೈತರು ರಾತ್ರೋರಾತ್ರಿ ಪ್ರತಿಭಟನೆ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನೀರು ಬಿಟ್ಟಿದ್ದು ತಿಳಿಯುತ್ತಿದ್ದಂತೆ ರೈತರ ಮುಖಂಡ ನಂಜುಂಡೇಗೌಡರ ನೇತೃತ್ವದಲ್ಲಿ ಸಾವಿರಾರು ರೈತರು ಧಾವಿಸಿ ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಡ್ಯಾಂನಲ್ಲಿ ಬೇಲಿ ಹಾಕಿದ್ದರಿಂದ ರೈತರಿಗೆ ಅದು ಸಾಧ್ಯವಾಗಿಲ್ಲ. ಆದರೆ, ಪ್ರತಿಭಟನೆಗಿಳಿದ ರೈತರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ಕೆಲ ರೈತರು ನೀರಿಗೆ ಇಳಿದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೂಡ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೆಳಗಿನ ಜಾವವೇ ಜಗದೀಶ್ ಶೆಟ್ಟರ್ ಮನೆ ಮುಂದೆ ಧರಣಿ ನಡೆಸಿದರು. ತಮಿಳು ಚಿತ್ರಗಳನ್ನೇ ಪ್ರದರ್ಶಿಸುವ ನಟರಾಜ್ ಚಿತ್ರಮಂದಿರಕ್ಕೆ ನುಗ್ಗಿ ಫ್ಲೆಕ್ಸ್‌ಗಳನ್ನು ಹರಿದುಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಗದೀಶ್ ಶೆಟ್ಟರ್ ಅವರಿಗೆ ನಿಜವಾಗಲೂ ಸ್ವಾಭಿಮಾನ ಎನ್ನುವುದೇನಾದರೂ ಇದ್ದರೆ ಕೂಡಲೆ ರಾಜೀನಾಮೆ ನೀಡಬೇಕು ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಕೂಗು ಹಾಕಿದ್ದಾರೆ. ಪೊಲೀಸರು ನಾರಾಯಣ ಗೌಡ ಮತ್ತಿತರ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಕಾವೇರಿ ನೀರು ಪ್ರಾಧಿಕಾರದ ಸಭೆ ನವದೆಹಲಿಯಲ್ಲಿ ಶನಿವಾರ ನಡೆಯುವ ಸಾಧ್ಯತೆ ಇರುವುದರಿಂದ, ತಮಿಳುನಾಡಿಗೆ ನೀರನ್ನು ಬಿಡುಗಡೆ ಮಾಡಲೇಬೇಕಾದಂತಹ ಸಂದಿಗ್ಧದಲ್ಲಿ ಕರ್ನಾಟಕ ಸಿಲುಕಿತ್ತು. ಶನಿವಾರ ಕೂಡ ಮಂಡ್ಯ ಬಂದ್ ಆಗುವ ಲಕ್ಷಣಗಳಿವೆ.












Click it and Unblock the Notifications