ಬೈಲುಕೊಪ್ಪ ಬಳಿ ಕಾರುಗಳ ಢಿಕ್ಕಿ, 8 ಸಾವು

ಸುಂಟಿಕೊಪ್ಪದ ಕಾರ್ಪೆಂಟರ್ ಶಫಿ (43), ಸಹೋದರ ರಫೀಕ್ (26), ಪತ್ನಿ ರಮೀಝ (36), ಪುತ್ರರಾದ ಇರ್ಫಾನ್ (19), ಇಮ್ರಾನ್ (16), ಪುತ್ರಿ ತಸ್ಮಿಯಾ (13), ಕಿರಿಯ ಪುತ್ರ ಮೂರು ವರ್ಷದ ಆಫ್ನಾನ್ ಹಾಗೂ ಮೈಸೂರು ಜಿ.ಪಂ. ಮಾಜಿ ಸದಸ್ಯ ಕಾಳತಿಮ್ಮನಹಳ್ಳಿ ಚೌಡಯ್ಯ (50) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಸುಂಟಿಕೊಪ್ಪ ನಿವಾಸಿಯಾದ ಕಾರ್ಪೆಂಟರ್ ಶಫಿ ಕೆಲಸ ಮುಗಿಸಿ ಸುಂಟಿಕೊಪ್ಪದಿಂದ ಕುಶಾಲನಗರ ಮಾರ್ಗವಾಗಿ ಪಿರಿಯಾಪಟ್ಟಣದ ತಮ್ಮ ತಾಯಿಯ ಮನೆಗೆ ಮಾರುತಿ ಕಾರಿನಲ್ಲಿ ತೆರಳುತ್ತಿದ್ದಾಗ ಬೈಲುಕೊಪ್ಪ ಬಳಿ ಇಂಡಿಗೋ ಕಾರು ಢಿಕ್ಕಿ ಹೊಡೆದಿದೆ.
ಇದರಿಂದ ಇಂಡಿಗೋ ಕಾರಿನಲ್ಲಿದ್ದ ಮೈಸೂರು ಜಿ.ಪಂ. ಮಾಜಿ ಸದಸ್ಯ ಚೌಡಯ್ಯ ಹಾಗೂ ಮಾರುತಿ ಕಾರಿನಲ್ಲಿದ್ದ ಶಫಿ ಮತ್ತು ಪತ್ನಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆ ಉಳಿದ ಇಬ್ಬರು ಮಕ್ಕಳು ಮೈಸೂರು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟರು.
ಘಟನೆಯ ವಿಷಯ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಮಂದಿ ಅಪಘಾತ ಸ್ಥಳಕ್ಕೆ ಧಾವಿಸಿ ಬಂದರು. ಅಪಘಾತಕ್ಕೀಡಾದ ಎರಡೂ ಕಾರುಗಳು ಸಂಪೂರ್ಣ ನಜ್ಜುಗುಜ್ಜಾಗಿವೆ.
ಬೈಲುಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹಗಳನ್ನು ಕುಶಾಲನಗರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆಯ ಶವಾಗಾರದ ಮುಂದೆ ಮೃತರ ಸಂಬಂಧಿಕರ ರೋದನ ಮುಗಿಲುಮುಟ್ಟಿದೆ.












Click it and Unblock the Notifications