ಸಿಟಿಗ್ರೂಪ್ ನಿಂದ 11 ಸಾವಿರ ಉದ್ಯೋಗ ಕಡಿತ

ಕಳೆದ ಆರ್ಥಿಕ ವರ್ಷದ ಕೊನೆ ತ್ರೈಮಾಸಿಕದಲ್ಲಿ 267,000 ಉದ್ಯೋಗಿಗಳಲ್ಲಿ ಶೇ.4ರಷ್ಟು ಮಾನವ ಸಂಪನ್ಮೂಲ ಕಡಿಮೆಯಾಗಲಿದೆ. ಇದು ವಿಶ್ವದ ಎಲ್ಲಾ ಕೇಂದ್ರಗಳಲ್ಲೂ ಅನ್ವಯವಾಗಲಿದೆ ಎಂದು ಸಂಸ್ಥೆ ಹೇಳಿದೆ.
ಇನ್ಸ್ ಸ್ಟಿಟ್ಯೂಷನಲ್ ಕ್ಲೈಂಟ್ ವಿಭಾಗದಲ್ಲಿ 1,900, ಕಸ್ಟಮರ್ ಬ್ಯಾಂಕಿಂಗ್ ಬಿಸಿನೆಸ್ ನಲ್ಲಿ 6,200, ಆಪರೇಷನ್ಸ್ ಹಾಗೂ ತಂತ್ರಜ್ಞಾನ ವಿಭಾಗದಲ್ಲಿ 2,600 ಉದ್ಯೋಗಿಗಳನ್ನು ಮನೆಗೆ ಕಳಿಸಲಾಗುತ್ತದೆ.
ಸಿಟಿಗ್ರೂಪ್ ನಿಂದ ಈ ಆತಂಕಕಾರಿ ಸುದ್ದಿ ಹೊರಬಿದ್ದರೂ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಬುಧವಾರ(ಡಿ.5) ಕಂಪನಿಯ ಷೇರುಗಳು ಶೇ 4 ರಷ್ಟು ಮೇಲಕ್ಕೇರಿತ್ತು. ಗುರುವಾರ ಕೂಡಾ 36.46 ಡಾಲರ್ ನಂತೆ ಶೇ 6.33 ರಷ್ಟು ಏರಿಕೆ ಕಂಡಿದೆ.
ಮಾಜಿ ಸಿಇಒ ವಿಕ್ರಮ್ ಪಂಡಿತ್ ನಿರ್ಗಮನದ ನಂತರ ಚೇರ್ಮನ್ ಮೈಕಲ್ ಇ ಒ'ನಿಲ್ ಹಾಗೂ ಸಿಇಒ ಮೈಕಲ್ ಕೊರ್ಬಾಟ್ ಅವರು ಕೂಡಾ ವಿಕ್ರಮ್ ಹಾದಿಯಲ್ಲೇ ಸಾಗಿದ್ದು, ಸಂಸ್ಥೆಯ ಆರ್ಥಿಕ ಖರ್ಚು ವೆಚ್ಚ ಕಡಿವಾಣ ಹಾಕಲು ಉದ್ಯೋಗಿಗಳ ಸಂಖ್ಯೆ ಕಡಿತಕ್ಕೆ ಮುಂದಾಗಿದ್ದಾರೆ.
ಸುಮಾರು 4,500 ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿ 2011ರಲ್ಲಿ ಸುಮಾರು 1.4 ಬಿಲಿಯನ್ ಡಾಲರ್ ಉಳಿತಾಯ ಗಳಿಸಲು ಸಿಇಒ ವಿಕ್ರಮ್ ಪಂಡಿತ್ ಕಾರಣರಾಗಿದ್ದರು. ಉದ್ಯೋಗಿಗಳ ವಜಾ, ನೂತನ ಆರ್ಥಿಕ ನೀತಿ, ಗ್ರಾಹಕ ಸಂವೇದಿ ಕ್ರಮಗಳನ್ನು ಹೊರಡಿಸಿದ ಪಂಡಿತ್ ಅನುಸರಿಸಿದ ನೀತಿ ನಿಯಮದ ಬಗ್ಗೆ ಸಿಟಿ ಗ್ರೂಪ್ ಬೋರ್ಡ್ ನಲ್ಲಿ ಅನೇಕರು ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ವಿಕ್ರಮ್ ಪಂಡಿತ್ ಹಾಕಿಕೊಟ್ಟ ಮಾರ್ಗದಲ್ಲೇ ಸಿಟಿಗ್ರೂಪ್ ಅನಿವಾರ್ಯವಾಗಿ ಸಾಗುತ್ತಿದ್ದು, ಉದ್ಯೋಗಗಳ ಕಡಿತದಿಂದ ಹೆಚ್ಚಿನ ಲಾಭ ಗಳಿಸುವ ನಿರೀಕ್ಷೆ ಹೊಂದಿದೆ.
2011ರಲ್ಲಿ ಉದ್ಯೋಗಿಗಳನ್ನು ವಜಾ ಮಾಡಿಸುಮಾರು 1.4 ಬಿಲಿಯನ್ ಡಾಲರ್ ಉಳಿತಾಯ ಕಾಣಲಾಗಿತ್ತು. 2007 ರಿಂದ 2011 ರ ಅವಧಿಯಲ್ಲಿ ಸಿಟಿಸಂಸ್ಥೆ 95,000 ಉದ್ಯೋಗ ಕಡಿತ ಘೋಷಿಸಿತ್ತು. ಜನರಲ್ ಮೋಟರ್ಸ್ ಬಿಟ್ಟರೆ ಸಿಟಿಗ್ರೂಪ್ ಭಾರಿ ಪ್ರಮಾಣದಲ್ಲಿ ಪಿಂಕ್ ಸ್ಲಿಪ್ ವಿತರಿಸಿದೆ.
ಬುಧವಾರ (ಡಿ.5) ಘೋಷಿಸಿರುವ ಉದ್ಯೋಗ ಕಡಿತದಿಂದಾಗಿ 2014ರ ಆರ್ಥಿಕ ವರ್ಷ ಆರಂಭಕ್ಕೂ ಮುನ್ನ ಸುಮಾರು 1.1 ಬಿಲಿಯನ್ ಡಾಲರ್ ವಾರ್ಷಿಕ ಉಳಿತಾಯದ ನಿರೀಕ್ಷೆಯಿದೆ.
ವಾರ್ಷಿಕವಾಗಿ ಸುಮಾರು 300 ಮಿಲಿಯನ್ ಡಾಲರ್ ಕಳೆದುಕೊಳ್ಳುತ್ತಿರುವ ಕಂಪನಿಯ ಕೈ ಹಿಡಿಯಲು ಸರ್ಕಾರ ಕೂಡಾ ಒಂದಷ್ಟು ಪ್ಯಾಕೇಜ್ ಘೋಷಿಸಿತ್ತು. 45 ಬಿಲಿಯನ್ ಡಾಲರ್ ಲೈಫ್ ಲೈನ್ ಪಡೆದಿದ್ದ ಸಿಟಿಗ್ರೂಪ್ ಸ್ಥಿತಿ ನಿಧಾನಗತಿಯಿಂದ ಸುಧಾರಿಸುತ್ತಿದೆ.
ಸಿಟಿಗ್ರೂಪ್ ನಂತರ ಬ್ಯಾಂಕ್ ಆಫ್ ಅಮೆರಿಕ ಕಾರ್ಪ್, ಗೋಲ್ಡ್ ಮನ್ ಸಾಚ್ಸ್ ಗ್ರೂಪ್ ಹಾಗೂ ಯುಬಿಎಸ್ ಎಬಿ ಕೂಡಾ ಅದೇ ಹಾದಿ ಹಿಡಿಯುವ ಸಾಧ್ಯತೆ ಹೆಚ್ಚಿದೆ.
ಟರ್ಕಿ, ಪಾಕಿಸ್ತಾನ, ಪರುಗ್ವೆ, ರೊಮಾನಿಯಾ ಹಾಗೂ ಉರುಗ್ವೆಗಳಲ್ಲಿ ಸಿಟಿಗ್ರೂಪ್ ತನ್ನ ವಿಭಾಗಗಳನ್ನು ಮುಚ್ಚಲಿದೆ. ಈವರೆಗೂ 1,60,000 ಉದ್ಯೋಗಿಗಳನ್ನು ಮನೆಗೆ ಕಳಿಸಿದ ಕೀರ್ತಿ ಸಿಟಿಗ್ರೂಪ್ ಗೆ ಸಲ್ಲುತ್ತದೆ.












Click it and Unblock the Notifications