ಎಫ್ ಡಿಐ: ಯುಪಿಎ ಗೆಲ್ಲಿಸಿದ ಮಾಯಾ, ಮುಲಾಯಂ
ನವದೆಹಲಿ, ಡಿ.5: ಬಹು ಬ್ರ್ಯಾಂಡ್ ಚಿಲ್ಲರೆ ಮಳಿಗೆಯಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಮುಂದಾಗಿರುವ ಯುಪಿಎ ಸರ್ಕಾರಕ್ಕೆ ಲೋಕಸಭೆಯಲ್ಲಿ ಬುಧವಾರ (ಡಿ.5) ನಿರೀಕ್ಷಿತ ಜಯ ದೊರಕಿದೆ. ಎಫ್ ಡಿಐ ಪರ 253 ಮತ ಹಾಗೂ ವಿರುದ್ಧ 218 ಮತಗಳು ಚಲಾವಣೆಗೊಂಡಿದೆ ಎಂದು ಸ್ಪೀಕರ್ ಮೀರಾಕುಮಾರ್ ಅವರು ಘೋಷಿಸಿದ್ದಾರೆ.
ನಿರೀಕ್ಷೆಯಂತೆ ಸಮಾಜವಾದಿ ಪಕ್ಷ(ಎಸ್ ಪಿ) ಹಾಗೂ ಬಹುಜನ ಸಮಾಜವಾದಿ ಪಕ್ಷ(ಬಿಎಸ್ ಪಿ)ದ ಸಂಸದರು ಕೊನೆಕ್ಷಣದಲ್ಲಿ ಸಂಸತ್ತಿನಿಂದ ಹೊರ ನಡೆಯುವ ಮೂಲಕ ಯುಪಿಎಗೆ ನೆರವಾದರು.

ಎಸ್ ಪಿ ಹಾಗೂ ಬಿಎಸ್ಪಿ ನಡೆಯಿಂದ ಯುಪಿಎ ಸರ್ಕಾರದ ಮಾನ ಉಳಿದಿದೆ. ಸಮಾಜವಾದಿ ಪಕ್ಷದ 22 ಸಂಸದರು ಹಾಗೂ ಬಿಎಸ್ ಪಿಯ 21 ಸಂಸದರ ಗೈರು ಹಾಜರಲ್ಲಿ ನಡೆದ ಧ್ವನಿ ಮತದಾನದಲ್ಲಿ ಪ್ರತಿಪಕ್ಷಗಳಿಗೆ ಸೋಲುಂಟಾಗಿದೆ.
ಇದಕ್ಕೂ ಮುನ್ನ ನಮ್ಮ ಪಕ್ಷ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಡಿಎಂಕೆ ಮುಖ್ಯಸ್ಥ ಎಂ ಕರುಣಾನಿಧಿ ಘೋಷಿಸಿದ್ದರು. ಅದರಂತೆ, ಸಂಸತ್ತಿನಲ್ಲಿ ಎಫ್ ಡಿಐ ಪರ ಮತ ಡಿಎಂಕೆ ಸಂಸದರು ಮತ ಹಾಕಿದ್ದಾರೆ.
"Nescafe peene walon, poocho Advaniji se Twitter ka istemal kyun kartein hain, woh videshi nahi hain kya". ಎಂದು ಲಾಲೂ ಪ್ರಸಾದ್ ಯಾದವ್ ಕೇಳಿದ್ದು ಡೈಲಾಗ್ ಆಫ್ ದಿ ಡೇ ಎನ್ನಬಹುದು.
ನಾವು ಕೋಕಾ ಕೋಲಾವನ್ನು ಹಿಂದಕ್ಕೆ ಕಳಿಸಿದ್ದೆವು. ಆದರೆ, ಮತ್ತೆ ಬಂದ ಕಂಪನಿ ಪಾರ್ಲೆಯ ಥಮ್ಸ್ ಅಪ್ ಖರೀದಿಸಿತು. ಆದರೆ, ಕೋಕ್ ನಷ್ಟೇ ಥಮ್ಸ್ ಆಪ್ ಕೂಡಾ ಜನಪ್ರಿಯತೆ ಉಳಿಸಿಕೊಂಡಿದೆ.
ಎಫ್ ಡಿಐ ವಿರೋಧಿಸುವವರು ಮಾಲ್ ಗಳನ್ನು ಏಕೆ ವಿರೋಧಿಸುತ್ತಿಲ್ಲ. ನಿಮ್ಮ ನಾಯಕರೇ ಮಾಲ್ ಗಳನ್ನು ಕಟ್ಟುತ್ತಿರುವುದೇಕೆ ಎಂದು ಎನ್ ಸಿಪಿ ನಾಯಕ ಪ್ರಫುಲ್ ಪಟೇಲ್ ಅವರು ಎನ್ ಡಿಎಗೆ ಪ್ರಶ್ನೆ ಎಸೆದು ಕಂಗಾಲಾಗಿಸಿದರು.
ಸಂಸತ್ತಿನಲ್ಲಿ ಯುಪಿಎ 262 ಸ್ಥಾನ ಪ್ಲಸ್ 50 ಬಾಹ್ಯ ಬೆಂಬಲ ಹೊಂದಿತ್ತು. ಎನ್ ಡಿಎ 151 ಹಾಗೂ ಎಡಪಕ್ಷಗಳು, ಇತರೆ 87 ಸ್ಥಾನ ಹೊಂದಿತ್ತು. ಚಳಿಗಾಲದ ಅಧಿವೇಶನದಲ್ಲಿ ಸುಮಾರು 100 ಕ್ಕೂ ಅಧಿಕ ಮಸೂದೆಗಳು ಬಾಕಿ ಇದ್ದು 3 ಮಸೂದೆಗಳು ಮಾತ್ರ ಅನುಮೋದನೆ ಪಡೆಯುವ ಸಾಧ್ಯತೆಯಿದೆ.
ತಾಂತ್ರಿಕವಾಗಿ ನೋಡಿದರೆ, ಎಫ್ ಡಿಐ ಸರ್ಕಾರದ ಕಾರ್ಯಕಾರಿ ನಿರ್ಣಯವಾಗಿದ್ದು, ಆರ್ಥಿಕ ಸುಧಾರಣೆಗಾಗಿ ಅನಿವಾರ್ಯ ಎಂದು ಸರ್ಕಾರ ವಾದಿಸಬಹುದಾಗಿದೆ. ಇದಕ್ಕೆ ಸಂಸತ್ತಿನ ಅನುಮತಿ, ಒಪ್ಪಿಗೆ ಅಗತ್ಯವಿರುವುದಿಲ್ಲ.












Click it and Unblock the Notifications