ಗಾಲಿ ರೆಡ್ಡಿ ಜಾಮೀನು ಆಸೆ ಮತ್ತೊಮ್ಮೆ ಭಗ್ನ

ಸಿಬಿಐ ವಿಶೇಷ ನ್ಯಾಯಾಲಯ ಗಾಲಿ ರೆಡ್ಡಿ ಅವರ ಜಾಮೀನು ಅರ್ಜಿಯನ್ನು ಬುಧವಾರ (ಡಿ.5) ತಿರಸ್ಕರಿಸಿ, ಜಾಮೀನು ನೀಡಲು ನಿರಾಕರಿಸಿದೆ.
ಗಾಲಿ ಜನಾರ್ದನ ರೆಡ್ಡಿ ಅವರಿಗೆ ಬೇಲೇಕೇರಿ ಪ್ರಕರಣದಲ್ಲಿ ಜಾಮೀನು ನೀಡಲು ಸಿಬಿಐ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜನಾರ್ದನ ರೆಡ್ಡಿ ಅವರು ಜಾಮೀನು ಪಡೆದು ಹೊರಗೆ ಬಂದರೆ ಸಾಕ್ಷಿ ನಾಶ ಮಾಡುವ ಸಾಧ್ಯತೆ ಹೆಚ್ಚಿದೆ. ರೆಡ್ಡಿ ಅವರು ಪ್ರಭಾವಿ ನಾಯಕರಾಗಿದ್ದು, ತನಿಖೆಗೆ ಅಡ್ಡಿ ಉಂಟಾಗುವ ಸಾಧ್ಯತೆಯೂ ಇದೆ ಎಂದು ವಾದಿಸಿದರು. ಸಿಬಿಐ ತಂಡದ ವಾದ ಮನ್ನಿಸಿದ ನ್ಯಾಯಾಲಯ, ಜಾಮೀನು ನೀಡಲು ನಿರಾಕರಿಸಿದೆ.
ಬೇಲೆಕೇರಿ ಅದಿರು ನಾಪತ್ತೆ ಮತ್ತು ಅಕ್ರಮ ಗಣಿಗಾರಿಕೆ ಮತ್ತು ಸಾಗಾಣಿಕೆ ವಿರುದ್ಧ ತನಿಖೆ ನಡೆಸಿರುವ ಸಿಬಿಐ ತಂಡ, ಸುಪ್ರೀಂ ಕೋರ್ಟ್‌ಗೆ ತನ್ನ ಪ್ರಾಥಮಿಕ ತನಿಖಾ ವರದಿಯನ್ನು ಸಿಬಿಐ ತಂಡ ಸಲ್ಲಿಸಿ ಬಂದಿದೆ.
ಕಾರವಾರ ಜಿಲ್ಲೆಯ ಬೇಲೆಕೇರಿ ಬಂದರಿನಲ್ಲಿ ಲಕ್ಷಾಂತರ ಟನ್ ಅಕ್ರಮ ಅದಿರು ರಫ್ತುನ್ನು ಕುರಿತು ಸಿಇಸಿ ಸಲ್ಲಿಸಿದ ವರದಿಯ ಆಧಾರದ ಮೇಲೆ ಸುಪ್ರೀಂಕೋರ್ಟ್ ಕಳೆದ ವರ್ಷ ಸೆಪ್ಟೆಂಬರ್ ಮೊದಲನೇ ವಾರದಲ್ಲಿ ಸಿಬಿಐ ತನಿಖೆಗೆ ಆದೇಶಿಸಿತ್ತು. ಆರು ವಾರಗಳ ಒಳಗೆ ಪ್ರಾಥಮಿಕ ವರದಿ ನೀಡುವಂತೆ ಸೂಚಿಸಿತ್ತು.
ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ಸಿಬಿಐ ತನಿಖಾ ತಂಡ ಬಳ್ಳಾರಿ ನಗರ, ಹೊಸಪೇಟೆ, ಸಂಡೂರು, ಕೊಪ್ಪಳ, ಗದಗ, ಹುಬ್ಬಳ್ಳಿ, ಕಾರವಾರ ಜಿಲ್ಲೆಗಳಲ್ಲಿನ ಗಣಿ ಮಾಲೀಕರು, ಸಾಗಾಣಿಕಾದಾರರು, ಅದಿರು ರಫ್ತು ಕಂಪನಿಗಳು, ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿಚಾರಣೆ ನಡೆಸಿ 60ಕ್ಕೂ ಹೆಚ್ಚಿನ ಪುಟಗಳ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದೆ.
ಬೇಲೇಕೇರಿ ಬಂದರಿನಿಂದ 8 ಲಕ್ಷ ಟನ್ ಗಳಷ್ಟು ಬೃಹತ್ ಪ್ರಮಾಣದ ಅದಿರು ನಾಪತ್ತೆಯಾಗಿತ್ತು. ಅಂದಿನ ಯಡಿಯೂರಪ್ಪ ಸರ್ಕಾರ ನಂತರ ಅದಿರು ರಫ್ತು ನಿಷೇಧಿಸಿದ್ದರು. ರಾಜ್ಯದ ಸುಮಾರು 10 ಬಂದರುಗಳಲ್ಲಿ ಅದಿರು ಸಾಗಾಟ ಸ್ಥಗಿತಗೊಂಡಿತ್ತು.
ಇದಕ್ಕೂ ಮುನ್ನ ಬೇಲೇಕೇರಿ ಅದಿರು ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ತನಿಖೆ ನಡೆಸಿ ಏಳು ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಬೇಲೇಕೇರಿ ಬಂದರು ಸಂರಕ್ಷಣಾಧಿಕಾರಿಯಾಗಿದ್ದ ಮಹೇಶ್ ಬಿಲಿಯೆ, ಸಲಗಾಂವಕರ್ ಮೈನಿಂಗ್ ಇಂಡಸ್ಟ್ರೀಸ್, ತುಂಗಭದ್ರ ಮಿನರಲ್ಸ್, ಜಿಂಪೆಕ್ಸ್ ಲಿಮಿಟೆಡ್ ಮತ್ತು ಆಯಾ ಕಂಪನಿಗಳ ಪ್ರತಿನಿಧಿಗಳ ವಿರುದ್ಧ ಕಲಂ 379, 411, 109, 120(ಬಿ) ಅಡಿ ಕೋರ್ಟ್ ಗೆ ದೋಷಾರೋಪಣ ಪತ್ರ ಸಲ್ಲಿಸಲಾಗಿತ್ತು.












Click it and Unblock the Notifications