ಡಿ.6, ಗುರುವಾರ ಮಂಡ್ಯದಲ್ಲಿ ಕಾವೇರಿ ಬಂದ್

ಮಂಡ್ಯದ ಪ್ರವಾಸಿ ಮಂದಿರದಲ್ಲಿ ಮಾಜಿ ಸಂಸದ ಮತ್ತು ಕಾವೇರಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಜಿ. ಮಾದೇಗೌಡ ಅವರ ನೇತೃತ್ವದಲ್ಲಿ ಸಭೆ ನಡೆದು, ಯಾವುದೇ ಕಾರಣಕ್ಕೂ ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಹನಿ ನೀರು ಕೂಡ ತಮಿಳುನಾಡಿಗೆ ಬಿಡಲು ಅವಕಾಶ ಮಾಡಬಾರದು ಎಂದು ನಿರ್ಧರಿಸಲಾಯಿತು.
ಕರ್ನಾಟಕದ ಹಿತರಕ್ಷಣೆಯನ್ನು ನಿರ್ಲಕ್ಷಿಸಿ ತಮಿಳುನಾಡಿಗೆ ನೀರು ಬಿಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದ್ದನ್ನು ವಿರೋಧಿಸಿ ಡಿ.6 ಮಾತ್ರವಲ್ಲ ಕರ್ನಾಟಕದ ರೈತರಿಗೆ ನ್ಯಾಯ ದೊರೆಯುವವರೆಗೆ ಬಂದ್ ಮುಂದುವರಿಸಲು ಕಾವೇರಿ ಹಿತರಕ್ಷಣಾ ಸಮಿತಿ ನಿರ್ಧರಿಸಿದೆ.
ಜೈಲಿಗೆ ಹೋಗಲು ಮತ್ತು ಪ್ರಾಣ ತ್ಯಾಗಕ್ಕೂ ಮಂಡ್ಯದ ರೈತರು ಸಿದ್ಧ. ಒಂದು ವೇಳಿ ರೈತರ ಕಾಳಜಿಯನ್ನು ಬದಿಗಿಟ್ಟು ತಮಿಳುನಾಡಿಗೆ ರಾಜ್ಯ ಸರಕಾರ ನೀರು ಬಿಟ್ಟಿದ್ದೇ ಆದಲ್ಲಿ ಕೆಆರ್‌ಎಸ್ ಡ್ಯಾಂನಲ್ಲಿಯೇ ಉಗ್ರ ಹೋರಾಟ ಮಾಡಲಾಗುವುದು ಎಂದು ಜಿ ಮಾದೇಗೌಡರು ರಾಜ್ಯ ಸರಕಾರಕ್ಕೆ ಚಿತಾವಣೆ ನೀಡಿದ್ದಾರೆ.
ಮಂಡ್ಯದಲ್ಲಿ ಕಾವೇರಿಗಾಗಿ ಹೋರಾಟ ಬುಧವಾರ ಸಂಜೆಯಿಂದಲೇ ಆರಂಭವಾಗಿದೆ. ಗೆಜ್ಜಲಗೆರೆ ಗ್ರಾಮದಲ್ಲಿ ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ತಮಿಳುನಾಡಿನ ವಿರುದ್ಧ ರೈತರು ಘೋಷಣೆಗಳನ್ನು ಕೂಗುತ್ತಿದ್ದಾರೆ. ಕರ್ನಾಟಕದ ಸ್ಥಿತಿಯನ್ನು ಸಮರ್ಥವಾಗಿ ಬಿಂಬಿಸಲು ವಿಫಲವಾದ ರಾಜ್ಯ ಸರಕಾರದ ವಿರುದ್ಧವೂ ಘೋಷಣೆಗಳನ್ನು ಕೂಗುತ್ತಿದ್ದಾರೆ. ರಸ್ತೆ ತಡೆಯಿಂದಾಗಿ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.
ಕನ್ನಡ ಸಂಘಟನೆಗಳ ಬೆಂಬಲ : ಸುಪ್ರೀಂಕೋರ್ಟ್ ಆದೇಶದಿಂದಾಗಿ ಮತ್ತೆ ಕಾವೇರಿ ವಿವಾದ ಭುಗಿಲೆದ್ದಿದ್ದು, ಮಂಡ್ಯ ಮತ್ತು ಮೈಸೂರು ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಕರವೇ ಕಾರ್ಯಕರ್ತರ ಸಭೆಯನ್ನು ಕರೆಯಲಾಗಿದೆ. ಈ ಹೋರಾಟಕ್ಕೆ ಇತರ ಕನ್ನಡಪರ ಸಂಘಟನೆಗಳು ಕೂಡ ಬೆಂಬಲ ವ್ಯಕ್ತಪಡಿಸಿವೆ.












Click it and Unblock the Notifications