ರಾಹುಲ್ ಗಾಂಧಿಗೆ ಪ್ರಧಾನಿ ಸಾಮರ್ಥ್ಯ ಇಲ್ಲ: ತಿವಾರಿ
ಲಖ್ನೋ,ಡಿ.4: ರಾಹುಲ್ ಗಾಂಧಿಗೆ ಮುಂದಿನ ಪ್ರಧಾನಿ ಅಭ್ಯರ್ಥಿಯಾಗಲು ಸಾಧ್ಯವಿಲ್ಲವೆಂದು ಎಲ್ಲೆಡೆ ಸಂಶಯಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಹಿರಿಯ ಕಾಂಗ್ರೆಸ್ಸಿಗ ಎನ್ ಡಿ ತಿವಾರಿ ಅವರೂ 'ರಾಹುಲ್ ಗೆ ಆ ಸಾಮರ್ಥ್ಯ ಇಲ್ಲ ಬಿಡಿ' ಎಂದಿದ್ದಾರೆ.
ಈ ಬಗ್ಗೆ ತಮ್ಮದೇ ಆದ ಸಂದೇಹಗಳನ್ನು ವ್ಯಕ್ತಪಡಿಸಿರುವ ತಿವಾರಿ 'ರಾಹುಲ್ ಪ್ರಧಾನಿಯಾಗುವುದು ಭವಿಷ್ಯವೇ ಹೇಳಬೇಕಷ್ಟೇ' ಎಂದು ವ್ಯಂಗ್ಯವಾಡಿದ್ದಾರೆ. ನಾಲ್ಕು ಬಾರಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರನ್ನು ಹತ್ತಿರದಿಂದ ಬಲ್ಲ ತಿವಾರಿ ಅದೇ ಗಾಂಧಿ ಕುಡಿಯಾದ ರಾಹುಲ್ ಬಗ್ಗೆ ಅಪಸ್ವರವೆತ್ತಿರುವುದು ಕುತೂಹಕಾರಿಯಾಗಿದೆ.

ಇನ್ನೂ ಕುತೂಹಲದ ಸಂಗತಿಯೆಂದರೆ ಇತ್ತೀಚಿನ ದಿನಗಳಲ್ಲಿ ಉತ್ತರ ಪ್ರದೇಶ ಸರಕಾರದಲ್ಲಿ ಸಕ್ರಿಯವಾಗಿರುವ ತಿವಾರಿ, ಮುಲಾಯಂ ಸಿಂಗ್ ಒಬ್ಬ ರಾಜಕೀಯ ಮುತ್ಸದ್ದಿ, ಸಮರ್ಥ ನಾಯಕ. ಅವರೊಬ್ಬ ಪ್ರಧಾನಿ ಅಭ್ಯರ್ಥಿ ಎಂದು ಬಲವಾಗಿ ಪ್ರತಿಪಾದಿಸಿದ್ದಾರೆ.
ರಾಹುಲ್ ಪ್ರಧಾನಿ ಅಭ್ಯರ್ಥಿಯಾಗುವುದನ್ನು ತಳ್ಳಿಹಾಕಿದ ಮರುಘಳಿಗೆಯಲ್ಲೇ ತಿವಾರಿ ಹೇಳಿದ್ದೇನೆಂದರೆ 'ಅಖಿಲೇಶ್ ಯಾದವ್ ರಾಜ್ಯದ ಮುಖ್ಯಮಂತ್ರಿಯಾಗಿ ಉತ್ತರಪ್ರದೇಶವನ್ನು ಮುನ್ನಡೆಸಿದರೆ ಅವರಪ್ಪ ಮುಲಾಯಂ ಅವರು ಪ್ರಧಾನಿಯಾಗಿ ಭಾರತವನ್ನು ಮುನ್ನಡೆಸಬಲ್ಲರು' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಬಗ್ಗೆ ಏನು ಹೇಳುತ್ತೀರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ತಿವಾರಿ ಸ್ವಾರಸ್ಯಕರ ಉತ್ತರ ನೀಡಿದ್ದಾರೆ - 'ಯಾವ ಕಾಂಗ್ರೆಸ್ ಬಗ್ಗೆ ಕೇಳುತ್ತಿದ್ದೀರಿ? ನನಗೆ ಗೊತ್ತಿರುವುದೆಲ್ಲ ಒಂದೇ - ಅದುವೇ ಶರದ್ ಪವಾರ್ ನೇತೃತ್ವದ ಎನ್ ಸಿಪಿ!' ಎಂದು ತುಂಬು ಲಹರಿಯಲ್ಲಿ ನಗೆಯಾಡಿದ್ದಾರೆ.
ಅಷ್ಟೇ ಅಲ್ಲ. ತಿವಾರಿಜೀ ಕಾಂಗ್ರೆಸ್ ಕಚೇರಿಗೇನಾದರೂ ಭೇಟಿ ನಿಡುತ್ತೀರಾ? ಎಂದು ಕೇಳಿದ್ದೇ ತಡ ಕೋಪಗೊಂಡ ತಿವಾರಿ 'ಕಾಂಗ್ರೆಸ್ ಕಚೇರಿಯಾ? ಅದೆಲ್ಲಿದೆ ಸ್ವಾಮಿ' ಎಂದುತ್ತರಿಸಿದ್ದಾರೆ. ಹಾಗಾದರೆ, ತಿವಾರಿ ತಮ್ಮಷ್ಟೇ ಪುರಾತನವಾದ ಕಾಂಗ್ರೆಸ್ಸಿನಿಂದ ದೂರವಾಗುತ್ತಿದ್ದಾರಾ? ಎಂಬ ಸಂದೇಹ ಮೂಡಿದೆ.












Click it and Unblock the Notifications