ಕನ್ನಡಿಗರು, ತಮಿಳರು ನಾವೆಲ್ಲಾ ಒಂದೇ: ಕರುಣಾನಿಧಿ

ಎರಡೂ ರಾಜ್ಯದ ಜನತೆ ಸಹೋದರ, ಸಹೋದರಿಯರಂತೆ ಬದುಕ ಬೇಕೆನ್ನುವುದು ನನ್ನ ಆಶಯ. ಕಾವೇರಿ ಸಮಸ್ಯೆಯನ್ನು ಮುಂದಿಟ್ಟುಕೊಂಡು ಎರಡೂ ರಾಜ್ಯದ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದು ಬೇಡ ಎಂದು ಹಿರಿಯ ಡಿಎಂಕೆ ಮುಖಂಡ ಕರುಣಾನಿಧಿ ಸಲಹೆ ನೀಡಿದ್ದಾರೆ.
ಕಾವೇರಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗಲೂ ಈ ಮಾತನ್ನು ಹೇಳಿಕೊಂಡು ಬರುತ್ತಿದ್ದೇನೆ. ಸಮಸ್ಯೆ ಪರಿಹರಿಸಿಕೊಳ್ಳಲು ಕಾಳಜಿ ಬೇಕು, ಎರಡೂ ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಗಮನದಲ್ಲಿ ಇಟ್ಟುಕೊಂಡು ಕಾವೇರಿ ಸಮಸ್ಯೆ ಪರಿಹಾರ ಕಾಣಲಿ ಎಂದು ಕರುಣಾನಿಧಿ ಆಶಿಸಿದ್ದಾರೆ.
ಕರ್ನಾಟಕದಲ್ಲಿರುವ ಬಿಜೆಪಿ ಸರಕಾರ ಮತ್ತು ತಮಿಳುನಾಡಿನಲ್ಲಿರುವ ಎಐಡಿಎಂಕೆ ಸರಕಾರ ಮಾತುಕತೆ ಮೂಲಕ ಸಮಸ್ಯಗೆ ಸೂಕ್ತ ಪರಿಹಾರ ಕಂಡುಕೊಳ್ಳಲಿ ಎಂದು ಕರುಣಾನಿಧಿ ಹೇಳಿದ್ದಾರೆ.
ಈ ಮಧ್ಯೆ, ತಮಿಳುನಾಡಿನ ಈರೋಡಿನಲ್ಲಿ ಕರ್ನಾಟಕ ನೋಂದಣಿ ವಾಹನಗಳನ್ನು ತಡೆಗಟ್ಟಿ, ಜಪ್ತಿ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ತಮಿಳುನಾಡು ಪೊಲೀಸರು ಕೂಡಲೇ ಕಾರ್ಯಪ್ರವೃತ್ತರಾಗಿದ್ದು ಜಪ್ತಿಯಾದ ವಾಹನಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಮಿಳು ಮಾಧ್ಯಮಗಳು ವರದಿ ಮಾಡಿವೆ.
ತಮಿಳುನಾಡಿಗೆ ಹೊಂದಿಕೊಂಡಿರುವ ಕೊಳ್ಳೇಗಾಲ ಅರಣ್ಯ ಪ್ರದೇಶದಲ್ಲಿ ವಾಸವಾಗಿರುವ ಸುಮಾರು 600 ತಮಿಳು ಕುಟುಂಬವನ್ನು ಕರ್ನಾಟಕ ಅರಣ್ಯ ಇಲಾಖೆಯ ಅಧಿಕಾರಿಗಳು ಖಾಲಿ ಮಾಡಿಸಿದ್ದಾರೆಂದು ಬಂದ ವರದಿ ಹಿನ್ನಲೆಯಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಈ ಮೇಲಿನ ಹೇಳಿಕೆ ನೀಡಿದ್ದಾರೆ.












Click it and Unblock the Notifications