ಮೋದಿ ಮುಂದೆ ಮಂಡಿಯೂರುತ್ತಿರುವ ಬಿಜೆಪಿ ಮಂದಿ

ಸುಷ್ಮಾ ಬೆನ್ನಿಗೇ ಅರುಣ್ ಜೇಟ್ಲಿ ಮತ್ತು ಅನಂತ ಕುಮಾರ್ ಸಹ ಮೋದಿಗೆ ಜೈ ಜೈ ಎನ್ನುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. ಈ ಸಲ ಗುಜರಾತ್ ಮತದಾರರು ಮೋದಿಯನ್ನು ಆರಿಸಿದರೆ ಅದರಿಂದ ಮೋದಿಯನ್ನು ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದಂತಷ್ಟೇ ಅಲ್ಲ, ಬದಲಿಗೆ ಭಾವಿ ಪ್ರಧಾನಿಯನ್ನು ಆರಿಸಿದಂತೆ ಎಂದು ಸುಷ್ಮಾ ವಗೈರೆಗಳು ಅಧಿಕೃತವಾಗಿ ಹೇಳುತ್ತಿರುವುದು ಸ್ವಾರಸ್ಯಕರವಾಗಿದೆ.
ಮೋದಿ ಹ್ಯಾಟ್ರಿಕ್ ಜಯದ ಹೊಸ್ತಿಲಲ್ಲಿರುವಾಗ ಈ ಘೋಷಣೆಗಳು ಹೊರಬಿದ್ದಿವೆ. ಮೊನ್ನೆಮೊನ್ನೆಯವರೆಗೂ ಆಡ್ವಾಣಿ ಆಣತಿಯಂತೆ 'ಪ್ರಧಾನಿ ಅಭ್ಯರ್ಥಿ ಮೋದಿಗೆ' ಜಯಕಾರ ಹೇಳಲು ಹಿಂದೇಟುಹಾಕುತ್ತಿದ್ದ ಬಿಜೆಪಿ ಈಗ ರಾಗ ಬದಲಿಸುತ್ತಿರುವುದು ಆಶ್ಚರ್ಯಕರವಾಗಿದೆ. ಇದ್ದಕ್ಕಿಂದ್ದಂತೆ ಹೀಗೆ ಆಡ್ವಾಣಿ ಸಮ್ಮುಖದಲ್ಲೇ ಸುಷ್ಮಾ ಹೇಳುವ ಜರೂರತ್ತಾದರೂ ಏನು? ಇದರಿಂದ ಪರಿಸ್ಥಿತಿ ತಿಳಿಗೊಳ್ಳುವ ಬದಲು ಪಕ್ಷದಲ್ಲಿ ರಾಡಿ ಎಬ್ಬಿಸಿದಂತಾಗುವುದಿಲ್ಲವೇ?
ಈ ಮಧ್ಯೆ ಬಿಜೆಪಿಯ ಪ್ರಮುಖ ಮಿತ್ರ ಪಕ್ಷವಾದ ಜೆಡಿಯುನ ನಿತೀಶ್ ಕುಮಾರ್ ಬಿಜೆಪಿಯ ಈ ನಡೆಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಏಕೆಂದರೆ ಇಬ್ಬರೂ ಪ್ರಧಾನಿ ಅಭ್ಯರ್ಥಿಗಳೆಂದೇ ಗುರುತಿಸಿಕೊಳ್ಳುವ ಮೋದಿ ಮತ್ತು ನಿತೀಶ್ ಬದ್ಧ ವೈರಿಗಳು. ಒಂದು ವೇಳೆ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದರೆ NDA ಮೈತ್ರಿ ಕಳಚಿಕೊಳ್ಲುವುದಾಗಿ ಈಗಾಗಲೇ ನಿತೀಶ್ ಸಾಹೇಬರು ಹೇಳಿದ್ದಾರೆ.
ತಮ್ಮ ತಮ್ಮ ರಾಜ್ಯಗಳಲ್ಲಿ ಒಬ್ಬರ ನೆರಳನ್ನು ಮತ್ತೊಬ್ಬರು ನೋಡದಷ್ಟು ರಾಜಕೀಯವಾಗಿ ಕತ್ತಿ ಮಸೆಯುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ಅವರು ಬಿಜೆಪಿ ಪಕ್ಷ ಮೋದಿಯನ್ನು ಬಹಿರಂಗವಾಗಿಯೇ ಪ್ರಧಾನಿ ಅಭ್ಯರ್ಥಿ ಎಂದು ಹೇಳಿರುವುದನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.
ಏನೇ ಆಗಲಿ ಸದ್ಯಕ್ಕಂತೂ ಬಿಜೆಪಿ ತನ್ನನ್ನು ಅಧಿಕೃತವಾಗಿ ಪ್ರಧಾನಿ ಅಭ್ಯರ್ಥಿ ಎಂದು ಹೇಳಿರುವುದು ಮೋದಿಗೆ ಮುಖ್ಯಮಂತ್ರಿ ಗಾದಿ ಸಲೀಸಾಗಿದೆ ಎನ್ನಬಹುದು.












Click it and Unblock the Notifications