ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆಗೆ ನಾನು ರೆಡಿ

ಭಾನುವಾರ (ಡಿ.2) ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಗಣಿ ಉದ್ಯಮಿ ಟಪಾಲ್ ಗಣೇಶ್, ಗಾಲಿ ರೆಡ್ಡಿ ಸ್ಪರ್ಧೆಗೆ ಇಳಿದರೆ ನಾನು ಅವರ ವಿರುದ್ಧ ಕಣಕ್ಕಿಳಿಯುತ್ತೇನೆ. ಕೊಪ್ಪಳವಾಗಲಿ, ಬಳ್ಳಾರಿಯಾಗಲಿ ಎಲ್ಲಾದರೂ ಗಾಲಿ ರೆಡ್ಡಿ ಸೋಲಿಸುವುದು ನನ್ನ ಗುರಿ ಎಂದಿದ್ದಾರೆ.
ಜೈಲಿನಿಂದ ಸ್ಪರ್ಧೆ ಮಾಡುತ್ತಾರೆ ಎಂದು ಸೋಮಶೇಖರ ರೆಡ್ಡಿ ಹೇಳಿರುವುದು ನಾಚಿಕೆಗೇಡಿನ ಸಂಗತಿ. ಅವರೇನು ನಾಡಿಗಾಗಿ ಹೋರಾಟ ನಡೆಸಿ ಜೈಲು ಸೇರಿಲ್ಲ.
ಜನಾರ್ದನ ರೆಡ್ಡಿ ಅವರು ಜೈಲಿಗೆ ಯಾಕೆ ಹೋಗಿದ್ದಾರೆ ಎಂಬುದು ಜನರಿಗೆ ಗೊತ್ತು. ಕರ್ನಾಟಕದ ನೆಲವನ್ನು ಲೂಟಿ ಮಾಡಿದ್ದಾರೆ. ರೆಡ್ಡಿ ಬ್ರದರ್ಸ್ ಚುನಾವಣೆ ನಿಲ್ಲಲು ಅನರ್ಹರಾಗಿದ್ದಾರೆ.
ಹೆಂಡ, ಹಣ ಬಲದಿಂದ ಚುನಾವಣೆಗೆ ಇಳಿಯುವುದನ್ನು ತಡೆಯಬೇಕಿದೆ. ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಬಲ ಕೊಡುವ ಪಕ್ಷಗಳಿಗೆ ನಾನು ಬೆಂಬಲ ನೀಡುತ್ತೇನೆ. ನನ್ನನ್ನು ಯಾವ ಪಕ್ಷವೂ ಸಂಪರ್ಕಿಸಿಲ್ಲ ಎಂದು ಟಪಾಲ್ ಗಣೇಶ್ ಸ್ಪಷ್ಟಪಡಿಸಿದರು.
ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಕುಟುಂಬ ಗಳಿಸಿರುವ ಅಕ್ರಮ ಆಸ್ತಿ ಬಗ್ಗೆ ಸಂಪೂರ್ಣ ವಿವರಗಳನ್ನು ಕಲೆ ಹಾಕಲಾಗಿದೆ. ಎಲ್ಲಾ ದಾಖಲೆಗಳನ್ನು ಶೀಘ್ರದಲ್ಲೇ ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸುತ್ತೇನೆ ಎಂದು ಟಪಾಲ್ ಗಣೇಶ್ ಹೇಳಿದರು.
ರೆಡ್ಡಿ ಕಣಕ್ಕೆ: ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ. ಶ್ರೀರಾಮುಲು ಅವರು ಹೈದರಾಬಾದಿಗೆ ತೆರಳಿ, ಚಂಚಲಗೂಡ ಜೈಲಿನಲ್ಲಿರುವ ಜನಾರ್ದನ ರೆಡ್ಡಿ ಅವರನ್ನು ಭೇಟಿಯಾಗಿ ರಣತಂತ್ರ ರೂಪಿಸುವ ಸಂಬಂಧ ಮಾತುಕತೆ ನಡೆಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಒಂದು ಮೂಲದ ಪ್ರಕಾರ ಜನಾರ್ದನ ರೆಡ್ಡಿ ಕೊಪ್ಪಳ ಜಿಲ್ಲೆ ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿದ್ದು, ಸದ್ಯಕ್ಕೆ ಅವರಿಗೆ ಜಾಮೀನು ಸಿಗುವುದು ದೂರದ ಮಾತಾಗಿದೆ.
ಹಾಗಾಗಿ ಜೈಲಿನಿಂದಲೇ ಕಣಕ್ಕಿಳಿಯಲು ರೆಡ್ಡಿ ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಜನಾರ್ದನ ರೆಡ್ಡಿ ಅವರ ಪರಮಾಪ್ತರಾದ ರಾಜಶೇಖರ ಗೌಡ, ಮೃತ್ಯುಂಜಯ ಜಿಣಗಿ ಮತ್ತು ಸುರೇಶ್ ಬಾಬು ಅವರು ತೀವ್ರ ಸಮಾಲೋಚನೆಯಲ್ಲಿ ತೊಡಗಿದ್ದಾರೆ.
'ಜನಾರ್ದನ ರೆಡ್ಡಿ ಒಬ್ಬ ಒಳ್ಳೆಯ human being ಎಂದು ಜನರಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಜೈಲಿನಿಂದಲೇ ಸ್ಪರ್ಧಿಸಿದರೂ ಅವರ ಗೆಲುವು ಖಚಿತ' ಎಂದು ಟಿವಿ9 ಜತೆ ಮಾತನಾಡುತ್ತಾ ಸೋಮಶೇಖರ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದರು.
ಇನ್ನು, ರಾಮುಲು ಬಳ್ಳಾರಿ ಗ್ರಾಮಾಂತರ ಕ್ಷೇತ್ರವನ್ನು ಭದ್ರವಾಗಿಸಿಕೊಂಡಿದ್ದಾರೆ. ಅದರ ಜತೆಗೆ ಗದಗ ಜಿಲ್ಲೆಯಲ್ಲೂ ಜನಪ್ರಿಯವಾಗಿರುವ ರಾಮುಲು ಅಲ್ಲಿಂದಲೂ ಸ್ಪರ್ಧಿಸಲು ಬಯಸಿದ್ದಾರೆ.
ಗದಗ ಜಿಲ್ಲೆಯಲ್ಲಿ ಸ್ಪರ್ಧಿಸುವುದರಿಂದ ಪಕ್ಕದ ಹಾವೇರಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಲ್ಲೂ ಪ್ರಭಾವ ಬೀರಬಹುದು ಎಂಬ ಆಲೋಚನೆ ರಾಮುಲು ಅವರದ್ದು ಎನ್ನಲಾಗಿದೆ.












Click it and Unblock the Notifications