ಬೇಕಾದ್ದು ಮಾಡಿಕೊಳ್ಳಿ, ನಾವು ರೆಡಿ : ಬಿಎಸ್ ವೈ

ನಾನೇ ಸ್ಥಾಪಿಸಿದ ಸರ್ಕಾರವನ್ನು ಉರುಳಿಸುವ ಉದ್ದೇಶ ನನಗಿಲ್ಲ. ಆದರೆ, ಬಿಜೆಪಿ ವರಿಷ್ಠರಿಗೆ ಸರ್ಕಾರ ಇರುವುದು ಇಷ್ಟವಿಲ್ಲದಿದ್ದರೆ ಉರುಳಿಸಲಿ ಎಂದು ಕೆಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ.
ಎಚ್ಡಿಕೆ ಬಗ್ಗೆ : ಎಲುಬಿಲ್ಲದ ನಾಲಗೆ, ನನ್ನ ಬಗ್ಗೆ ಭಯ ಭೀತಿಯಾಗಿ ಎಲ್ಲರೂ ಮಾತನಾಡುತ್ತಿದ್ದಾರೆ. ನಾನು ಕೆಜೆಪಿ ಸ್ಥಾಪಿಸಲು ಯಾರ ಸುಪಾರಿ ಪಡೆದಿಲ್ಲ. ನನ್ನ ಹೋರಾಟ ಬಿಜೆಪಿ ಅಥವಾ ಜೆಡಿಎಸ್ ವಿರುದ್ಧ ಅಲ್ಲ. ಕರ್ನಾಟಕದ ಅಭಿವೃದ್ಧಿಗಾಗಿ ಶ್ರಮಿಸುವುದು ಕೆಜೆಪಿಯ ಮುಖ್ಯ ಗುರಿ ಎಂದು ಯಡಿಯೂರಪ್ಪ ಹೇಳಿದರು.
ಯಾರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದು ನಮ್ಮ ಗುರಿ. ಕೆಜೆಪಿ ಮುಂದಿನ ನಡೆ ಬಗ್ಗೆ ತಜ್ಞರ ಸಮಿತಿ ರಚಿಸಲಾಗಿದೆ. ಅವರು ಈ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಡಿ.9 ರ ಹಾವೇರಿಯಲ್ಲಿ ನಡೆಯಲಿರುವ ಕರ್ನಾಟಕ ಜನತಾ ಪಕ್ಷ ಉದ್ಘಾಟನೆ ಸಮಾರಂಭ ಯಶಸ್ಸಿನ ಬಗ್ಗೆ ಚಿಂತನೆ ನಡೆದಿದೆ.
ಹಾವೇರಿ ಸಮಾವೇಶಕ್ಕೆ ಬರುವ ಶಾಸಕರು, ಸಚಿವರ ವಿರುದ್ಧವೂ ಬಿಜೆಪಿ ಕ್ರಮ ಕೈಗೊಳ್ಳಲಿ. ಶೆಟ್ಟರ್ ಸರ್ಕಾರ ಆತ್ಮಹತ್ಯೆಗೆ ವರಿಷ್ಠರು ನಾಂದಿ ಹಾಡಲಿ ಎಂದು ಯಡಿಯೂರಪ್ಪ ಹೇಳಿದರು.
ಬಿಜೆಪಿಯಲ್ಲಿ ಭಿನ್ನಾಭಿಪ್ರಾಯವಿಲ್ಲ. ಈಗಲೂ ನಿಷ್ಠಾವಂತ ಕಾರ್ಯಕರ್ತರ ಪಡೆ ನಮ್ಮೊಂದಿಗಿದೆ. ಬಿಜೆಪಿಯಲ್ಲಿ ಬಿಕ್ಕಟ್ಟು ಇಲ್ಲ. ಸರ್ಕಾರ ಸಬಲವಾಗಿದೆ.ಕೆಜೆಪಿ ಬಗ್ಗೆ ನಾನೇನು ಹೇಳಲಾರೆ ಎಂದು ಶಿವಮೊಗ್ಗದ ಹೆಲಿಪ್ಯಾಡ್ ಬಳಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.












Click it and Unblock the Notifications