ಶಿಕ್ಷಕಿ ಕಿರುಕುಳಕ್ಕೆ ಬೆಂಕಿ ಹಚ್ಚಿಕೊಂಡ ವಿದ್ಯಾರ್ಥಿ ಸಾವು

ನವೆಂಬರ್ 28ರಂದು ಇಲ್ಲಿನ ಇಂಡಿ ರಸ್ತೆಯಲ್ಲಿರುವ ನೀಲಕಂಠೇಶ್ವರ ವಿದ್ಯಾಮಂದಿರದ ಆವರಣದಲ್ಲೇ 10 ವರ್ಷದ ಬಾಲಕ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಬಾಲಕ ಅಜಯ್ ನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಶೇ 40 ರಿಂದ 50 ರಷ್ಟು ಸುಟ್ಟಗಾಯಗಳಾಗಿದೆ. ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದರು. ನಂತರ ಸೊಲ್ಲಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಭಾನುವಾರ ಮುಂಜಾನೆ ತೀವ್ರ ಉಸಿರಾಟದ ತೊಂದರೆ ಉಂಟಾಗಿ ವಿದ್ಯಾರ್ಥಿ ಅಜಯ್ ಸಾವನ್ನಪ್ಪಿದ್ದಾನೆ ಎಂದು ಡಾ.ಪ್ರಭು ತಿಳಿಸಿದರು.
'ಶಿಕ್ಷಕಿ ಬಗ್ಗೆ ನನ್ನ ಮಗ ಆರೋಪ ಮಾಡಿಲ್ಲ. ನಾವು ಯಾರ ವಿರುದ್ಧವೂ ದೂರು ನೀಡುವುಡಿಲ್ಲ. ಮಗನನ್ನು ಕಳೆದುಕೊಂಡ ದುಃಖ ತಗ್ಗಲು ಸಾಧ್ಯವಿಲ್ಲ ನಿನ್ನೆ ರಾತ್ರಿಯಿಂದಲೇ ಅವನಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಮುಂಜಾನೆ ತೀರಿಕೊಂಡಿದ್ದಾನೆ. ನಿನ್ನೆ ಚೆನ್ನಾಗಿ ಮಾತನಾಡುತ್ತಿದ್ದ' ಎಂದು ಮೃತಪಟ್ಟ ಬಾಲಕನ ತಂದೆ ಪ್ರಮೋದ್ ಪ್ರತಿಕ್ರಿಯಿಸಿದ್ದಾರೆ.
ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, 'ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಶಿಕ್ಷೆ ನೀಡದಂತೆ ಎಚ್ಚರಿಕೆ ನೀಡಲಾಗಿದೆ. ಬಾಲಕ ಬದುಕುತ್ತಾನೆ ಎಂಬ ಆಸೆ ಇತ್ತು. ಈ ದುರಂತ ಎಲ್ಲರಿಗೂ ಪಾಠವಾಗಲಿ' ಎಂದಿದ್ದಾರೆ.
ಶಿಕ್ಷಕಿಯೊಬ್ಬಳ ಕಿರುಕುಳ ತಾಳಲಾರದೆ 4ನೇ ತರಗತಿ ಓದುತ್ತಿರುವ ಬಾಲಕನೊಬ್ಬ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ ಘಟನೆ ಬಿಜಾಪುರವನ್ನು ತಲ್ಲಣಗೊಳಿಸಿತ್ತು.
ಇಂಡಿ ರಸ್ತೆಯಲ್ಲಿರುವ ನೀಲಕಂಠೇಶ್ವರ ವಿದ್ಯಾಮಂದಿರದಲ್ಲಿ 4ನೇ ತರಗತಿ ಓದುತ್ತಿದ್ದ ಅಜಯ್ ಪ್ರಮೋದ ಜಾಧವ್, ಶಾಲೆಯ ತರಗತಿಯ ಶಿಕ್ಷಕಿ ರಾಧಿಕಾ ರಜಪೂತ ಎಂಬುವರ ಕಿರುಕುಳಕ್ಕೆ ಬಲಿಯಾಗಿದ್ದಾನೆ.
ದುರಂತದ ವಿವರ: ರಾಧಿಕಾ ರಜಪೂತ ಅವರು ಪ್ರತಿದಿನ ವಿದ್ಯಾರ್ಥಿಗಳಿಗೆ ಮನೆಪಾಠ(ಹೋಮ್ ವರ್ಕ್) ನೀಡುತ್ತಿದ್ದರು. ಮನೆ ಪಾಠ ಮಾಡದೇ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡುತ್ತಿದ್ದರು ಎನ್ನಲಾಗಿದೆ.
ಆದರೆ, ವಿದ್ಯಾರ್ಥಿ ಅಜಯ್ ಶಾಲೆಗೆ ಹೋದರೆ ಶಿಕ್ಷಕಿ ರಾಧಿಕಾ ಅವರು ತನಗೆ ಶಿಕ್ಷೆ ನೀಡುತ್ತಾರೆಂದು ಭಾವಿಸಿ, ಬುಧವಾರ(ನ.28) ಬೆಳಗ್ಗೆ ತನ್ನಬಳಿ ಇದ್ದ 20 ರು. ಹಣದಿಂದ ನೀರು ಕುಡಿಯುವ ಪ್ಲ್ಯಾಸ್ಟಿಕ್ ಬಾಟಲಿಯಲ್ಲಿ ಸೀಮೆಎಣ್ಣೆ ಮತ್ತು ಒಂದು ಕಡ್ಡಿಪೆಟ್ಟಿಗೆಯನ್ನು ಖರೀದಿಸಿ ಬ್ಯಾಗ್‌ನಲ್ಲಿಯೇ ಇಟ್ಟುಕೊಂಡು ಶಾಲೆಗೆ ತೆರಳಿದ್ದ.
ಸೀಮೆ ಎಣ್ಣೆಯನ್ನು ಮೈಮೇಲೆ ಸುರಿದುಕೊಂಡು ಬೆಂಕಿ ಹಂಚಿಕೊಂಡಿದ್ದಾನೆ. ಬೆಂಕಿಯ ತಾಪ ತಾಳದೇ ಕಿರುಚುತ್ತಾ ಅಜಯ್ ಕೋಣೆಯಿಂದ ಇಳಿದು
ಕೆಳಗೆ ಓಡಿ ಬಂದಿದ್ದಾನೆ. ಅದನ್ನು ಕಂಡು ಗಾಬರಿಗೊಂಡ ಶಿಕ್ಷಕರು ತಕ್ಷಣವೇ ಆತನ ಮೈಮೇಲೆ ನೀರು ಹಾಕಿ ಬೆಂಕಿ ನಂದಿಸಿ ನಂತರ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು.
ಆತ್ಮಹತ್ಯೆಗೆ ಯತ್ನಿಸಿದ ಬಾಲಕ ಅಜಯ್‌ನನ್ನು ಮೊದಲು ತಾವು ವಿಚಾರಿಸಿದಾಗ ಮನೆಯಲ್ಲಿ ತನ್ನ ತಂದೆ-ತಾಯಿಗಳು ತನಗೆ ಕಿರುಕುಳ ನೀಡಿದ್ದಕ್ಕೆ ಮನನೊಂದು ಬೆಂಕಿ ಹಚ್ಚಿಕೊಂಡಿದ್ದಾಗಿ ತಮಗೆ ತಿಳಿಸಿದ್ದಾನೆ ಎಂದು ಶಿಕ್ಷಕರು ಹೇಳುತ್ತಾರೆ.
ಘಟನೆಯಿಂದಾಗಿ ಶಾಲೆಯಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಶಾಲೆಗೆ ಎರಡು ದಿನ ರಜೆ ನೀಡಲಾಗಿತ್ತು. ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವೈ.ಕೊಣ್ಣೂರ, ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ತನಿಖೆ ನಡೆದರೆ ಶಾಲೆ ಸಹಕರಿಸಲಿದೆ ಎಂದು ಶಾಲೆಯ ಮುಖ್ಯಾಧ್ಯಾಪಕಿ ಅರುಣಾ ತೆನಿಹಳ್ಳಿ ಹೇಳಿದ್ದಾರೆ.












Click it and Unblock the Notifications