ಸಚಿವ ಜೀವರಾಜ್ ಮೇಲೆ ಲೋಕಾಯುಕ್ತಕ್ಕೆ ದೂರು

ನರಸಿಂಹರಾಜಪಪುರ ತಾಲ್ಲೂಕಿನ ವಾಸುದೇವ ಕೋಟ್ಯಾನ್ ಎಂಬುವವರು ಸಚಿವ ಡಿ.ಎನ್.ಜೀವರಾಜ್ ಸೇರಿದಂತೆ 13 ಜನರ ವಿರುದ್ಧ ಖಾಸಗಿ ದೂರು ನೀಡಿದ್ದಾರೆ. ಅಕ್ರಮ ಸಕ್ರಮ ಯೋಜನೆಯಡಿ ತಮಗೆ ಬೇಕಾದವರಿಗೆ ಜಮೀನನ್ನು ಸಚಿವರು ಸಕ್ರಮಗೊಳಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಡಿ.ಎನ್.ಜೀವರಾಜ್ ಅವರು ಮಾಡಿದ ಲೋಪದಿಂದಾಗಿ 2004ನೆಯ ಸಾಲಿನಿಂದ ಈವರೆಗೆ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಯಾರಿಗೂ ಸಾಗುವಳಿ ಚೀಟಿ ದೊರೆತಿಲ್ಲ ಎಂದು ವಾಸುದೇವ ಕೋಟ್ಯಾನ್ ಆರೋಪಿಸಿದ್ದಾರೆ.
1991ರಲ್ಲಿ ನಮೂನೆ 50ರಲ್ಲಿ ಅಕ್ರಮ ಸಕ್ರಮ ಯೋಜನೆಯಡಿ 6339 ಜನ ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಕೇವಲ 1276 ಜನರಿಗೆ ಮಾತ್ರ ಸಕ್ರಮಗೊಳಿಸಲಾಗಿದೆ.
ನಮೂನೆ 53ರಲ್ಲಿ 4620 ಅರ್ಜಿ ಸಲ್ಲಿಸಿದ್ದರೆ ಕೇವಲ 530 ಜನರಿಗೆ ಸಕ್ರಮಗೊಳಿಸಲಾಗಿದೆ. ಸಚಿವ ಜೀವರಾಜ್ ತಮ್ಮ ಹಿಂಬಾಲಕ ರವಿಪ್ರಕಾಶ್ ಎಂಬಾತನ ಮೂಲಕ ತಮ್ಮ ಸಂಬಂಧಿಕರು, ಹಿಂಬಾಲಕರು ಹಾಗೂ ಆತ್ಮೀಯರ ಹೆಸರುಗಳನ್ನು ಅಕ್ರಮವಾಗಿ ಪಟ್ಟಿಯೊಳಗೆ ಸೇರಿಸಿದ್ದಾರೆ. ಸಚಿವರ ಹಿಂಬಾಲಕ ರವಿಪ್ರಕಾಶ್ ಈ ಅರ್ಜಿಗಳನ್ನು ತಿದ್ದಿದ್ದಾರೆ ಎಂದು ವಾಸುದೇವ ಅವರು ದೂರಿದ್ದಾರೆ.
ಸಚಿವ ಡಿ.ಎನ್.ಜೀವರಾಜ್ ಶಾಸಕರಾಗಿ ಆಯ್ಕೆಯಾದ ನಂತರ ಅಕ್ರಮ-ಸಕ್ರಮ ಸಮಿತಿಯ ಅಧ್ಯಕ್ಷರಾದರು. ನಂತರ 11.08.2009ರಲ್ಲಿ ಜಮೀನನ್ನು ಸಕ್ರಮಗೊಳಿಸುವ ಸಲುವಾಗಿ 85 ಜನರ ಪಟ್ಟಿಯನ್ನು ಅರಣ್ಯ ಇಲಾಖೆಯ ಅನುಮೋದನೆಗೆ ಸಲ್ಲಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ, ಅರ್ಜಿಗಳನ್ನು ತಿದ್ದಿರುವ ಕಾರಣ ನೀಡಿ ಪ್ರಸ್ತಾವನೆಯನ್ನು ಹಿಂದಿರುಗಿಸಿದ್ದರು ಎಂದರು.
ಸಮಿತಿಯಿಂದ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗಿತ್ತು. ಅಂದಿನಿಂದ ಈವರೆಗೂ ನರಸಿಂಹರಾಜಪುರ ತಾಲ್ಲೂಕಿನಲ್ಲಿ ಯಾವುದೇ ರೈತರ ಜಮೀನನ್ನು ಸಕ್ರಮಗೊಳಿಸಿಲ್ಲ. ಇದರಿಂದ ತಾಲ್ಲೂಕಿನಲ್ಲಿ ಸಾಗುವಳಿ ಮಾಡಿರುವ ಜನರು ಹಕ್ಕುಪತ್ರ ಪಡೆದುಕೊಳ್ಳುವಲ್ಲಿ ವಂಚಿತರಾಗಿದ್ದಾರೆ ಎಂದು ವಾಸುದೇವ್ ತಿಳಿಸಿದರು.
ಜನತೆಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸಚಿವ ಡಿ.ಎನ್. ಜೀವರಾಜ್, ಅಕ್ರಮ ಸಕ್ರಮ ಸಮಿತಿಯ ಮೂವರು ಸದಸ್ಯರು, ನರಸಿಂಹರಾಜಪುರ ತಾಲ್ಲೂಕಿನಲ್ಲಿ ತಹಸೀಲ್ದಾರರಾಗಿ ಸೇವೆ ಸಲ್ಲಿಸಿರುವ 5 ಜನ ಹಾಗೂ ಅರ್ಜಿಗಳನ್ನು ತಿದ್ದಿರುವ ರವಿಪ್ರಕಾಶ್ ಸೇರಿದಂತೆ ನಾಲ್ವರು ಫಲಾನುಭವಿಗಳ ವಿರುದ್ಧ ದೂರು ದಾಖಲಿಸಲಾಗಿದೆ ಎಂದರು.












Click it and Unblock the Notifications