ಕಾವೇರಿ ತಾಯಿಯೆ ಕಂಡೆ ನಿನ್ನ ಮಡಿಲಲ್ಲಿ ಎಂಥ ದೃಶ್ಯ!

ತಣ್ಣೀರುಹಳ್ಳ ರಾಘವ ಎಂಬವರ ಪುತ್ರಿ ಆಶಾ ಎಂಬುವರೇ ಪತಿ ಶಿವ ಮತ್ತು ಆತನ ಕುಟುಂಬದವರ ಪೈಶಾಚಿಕ ಕೃತ್ಯದಿಂದ ನೊಂದವರಾಗಿದ್ದು, ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪತಿ ಶಿವ, ಅತ್ತೆ ಲಕ್ಷ್ಮಿ, ಅತ್ತಿಗೆ ಶಾಂತ, ಭಾವ ರಾಜು ಎಂಬ ನಾಲ್ವರ ವಿರುದ್ಧ, ಐಪಿಸಿ ಸೆಕ್ಷನ್ 498(ಎ), 323, 504, 506 ಅನ್ವಯ ಪ್ರಕರಣವನ್ನು ಸೋಮವಾರಪೇಟೆ ಠಾಣೆ ವೃತ್ತನಿರೀಕ್ಷಕ ಸಿದ್ದಯ್ಯ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು ಸೇರಿದಂತೆ ಹಲವು ಕಡೆ ನೌಕರಿ ಮಾಡಿದ ಈ ದಂಪತಿಗಳು ಕಳೆದ ಎರಡು ವರ್ಷಗಳ ಹಿಂದೆ ಸೋಮವಾರಪೇಟೆ ಸಮೀಪದ ಚೌಡ್ಲು ಗ್ರಾಮದಲ್ಲಿ ವಾಸವಾಗಿದ್ದರು. ಆಶಾ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸಿದರೆ, ಪತಿ ಶಿವ ಆಟೋ ಚಾಲಕನಾಗಿದ್ದ. ಇತ್ತೀಚೆಗೆ ಪತ್ನಿಯ ನಡತೆಯ ಬಗ್ಗೆ ಸಂಶಯಗೊಂಡು ಮನೆಯವರೊಂದಿಗೆ ಸೇರಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.
ನೀನು ಪರಪುರುಷನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದೀಯ ಎಂದು ಆಗಾಗ್ಗೆ ಕಿರುಕುಳ ನೀಡುತ್ತಿದ್ದ ಶಿವ ಆ ಬಗ್ಗೆ ಪ್ರಮಾಣ ಮಾಡುವಂತೆ ನವೆಂಬರ್ 29ರಂದು ತಲಕಾವೇರಿಗೆ ಕರೆದೊಯ್ದಿದ್ದಾನೆ. ಬಲವಂತವಾಗಿ ಆಕೆಯ ಕೇಶಮುಂಡನ ಮಾಡಿಸಿ, ತಾಳಿ ಹಾಗೂ ಕಾಲುಂಗುರವನ್ನು ಕಸಿದುಕೊಂಡಿದ್ದನು ಎನ್ನಲಾಗಿದೆ.
ಇದನ್ನು ವಿರೋಧಿಸಿದ ಆಶಾಳ ಮೇಲೆ ಪತಿ ಶಿವ ಮತ್ತು ಆತನ ಕುಟುಂಬದವರು ಸೇರಿ ಹಲ್ಲೆ ನಡೆಸಿದ್ದಾರೆ. ಇದೀಗ ಹಲ್ಲೆಯಿಂದ ಗಾಯಗೊಂಡಿರುವ ಆಶಾ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನನ್ನ ಮೇಲೆ ಹಲ್ಲೆ ನಡೆಸಿ, ನನ್ನನ್ನು ಮನೆಯಿಂದ ಹೊರ ಹಾಕಿ ನನ್ನ ಎರಡು ಮಕ್ಕಳನ್ನು ಬೇರೆಡೆ ಸಾಗಿಸಿದ್ದಾರೆ ಎಂದು ದೂರಿದ್ದಾರೆ.












Click it and Unblock the Notifications